ಸಾಮಾಜಿಕ ಚಿಂತನೆಗೆ ಹಚ್ಚಿದ ಕವಿಗೋಷ್ಠಿ
ಮಹಾಪತಿದಾಸ್ ಮಹಾಮಂಟಪ ಬಿಜಾಪುರ
ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಆಕ್ರೋಶ, ಹಣದಾಸೆಗೆ ಸಂಬಂಧ ಕಳಚಿಕೊಳ್ಳುತ್ತಿರುವುದಕ್ಕೆ ಆತಂಕ, ಉತ್ತರ ಕರ್ನಾಟ ಪ್ರತ್ಯೇಕ ರಾಜ್ಯ ಕೂಗಿಗೆ ಅಸಮಾಧಾನ, ದಾರಿ ತಪ್ಪುತ್ತಿರುವ ಸರ್ಕಾರಗಳ ಬಗ್ಗೆ ಕವಿಗಳು ಕವನದ ಮೂಲಕ ಕೆಂಗಣ್ಣು ಬೀರಿದರು.
79 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಪತಿದಾಸ್ ಸಮಾನಾಂತರ ವೇದಿಕೆಯಲ್ಲಿ ಸೋಮವಾರ ನಡೆದ ಕವಿಗೋಷ್ಠಿಯಲ್ಲಿ 32 ಕವಿಗಳು ಕವನ ವಾಚಿಸಿ ಆಡಳಿತಶಾಹಿ ಹಾಗೂ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿದರು.
ಕವನಗಳ ಪೈಕಿ ಹಲವು ಪ್ರೀತಿ ಪ್ರೇಮ ಬಿತ್ತರಿಸುವ, ಮನದ ಭಾವ ಅಭಿವ್ಯಕ್ತತೆಯ ವೇದಿಕೆಯಂತಿರುತ್ತವೆ. ಇವೆಲ್ಲ ಚೌಕಟ್ಟನ್ನು ಮೀರಿ ಬಹುತೇಕ ಕವಿಗಳ ಸಾಮಾಜಿಕ ಚಿಂತನೆ, ಕಳಕಳಿ ಕುರಿತು ಕವನ ರಚಿಸಿ ಓದಿದ್ದು ಕವಿಗೋಷ್ಠಿಯ ವಿಶೇಷತೆ ಹಾಗೂ ವಿಭಿನ್ನತೆಯಾಗಿತ್ತು. ಸಾಕು ಸಾಕಿನ್ನು ಶೋಷಣೆಯ ಪರ್ವ, ಎಚ್ಚರವಿರಲಿ ರೊಟ್ಟಿ ತಟ್ಟುವ ಕೈ ಕೋವಿ ಹಿಡಿದಿತು... ಎನ್ನುವ ಕವನ ವಾಚಿಸಿದ ರಾಧಾ ಪ್ರಕಾಶ ಮಹಿಳೆಯರ ಮೇಲಾಗುತ್ತಿರು ದೌರ್ಜನ್ಯದ ವಿರುದ್ಧ ದನಿ ಎತ್ತಿದರು. ಮಾರುತಿ ಭೋಸ್ಲೆ, ಶಾರದಾ ಅಂಚನ್ ಅವರ ಕವನಗಳೂ ಮಹಿಳಾಪರ ದನಿ ಎತ್ತಿದವು.
ಮಾನವೀಯ ಸಂಬಂಧಗಳು ಹಣದಾಸೆಗಾಗಿ ಮರೆಯಾಗುತ್ತಿವೆ ಎಂಬ ಸಂಗತಿಯನ್ನು ಹನುಮಂತರಾಜ ಪಾಳ್ಯ ತಿಳಿಸಿದರು. ಅನೇಕ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಹೀಗಿರುವಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆನ್ನುವ ಬೇಡಿಕೆ ಏಕೆ ಎಂದು ತಿಪ್ಪೇರುದ್ರಪ್ಪ ಕವನದ ಮೂಲಕ ಪ್ರಶ್ನಿಸಿದರು.
ಕನ್ನಡ ನಾಡ ಹಬ್ಬಕ್ಕೆ, ಅಕ್ಷರ ಜಾತ್ರೆಗೆ ಬಂದವರಿಗೆ ಕನ್ನಡ ಕಸ್ತೂರಿ ಪರಿಮಳ ಆಸ್ವಾದಿಸುವ ರಸಗಳಿಗೆ.... ಅಂತಹ ಹಾಡುಗಳು ಕನ್ನಡ ನಾಡು, ನುಡಿಯ ಬಗೆಗಿನ ಪ್ರೀತಿ ಹೆಚ್ಚುವಂತೆ ಮಾಡಿತು. ಶಾಂತಾರಾಮ್ ನಾಯಕ ವಾಚಿಸಿದ, ಬೆಂಗಳೂರಿನ ವಿಧಾನಸೌಧ ಕನ್ನಡ ಶಕ್ತಿಧಾಮ, ಸರ್ಕಾರಿ ಕೆಲಸ ದೇವರ ಕೆಲಸವೆಂದು ನಡೆದಿದೆ ಭ್ರಷ್ಟಾಚಾರ ಅಪಾರ... ಎಂಬ ಕವನ ಆಡಳಿತಶಾಹಿಯ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿತು. ಚಂದ್ರಕಾಂತ ಪಡೇಸೂರ ತಮ್ಮ ಕವನದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ, ಶೋಷಣೆಯ ಮೇಲೆ ಬೆಳಕು ಚೆಲ್ಲಿದರು.
ಇದಕ್ಕೂ ಮುನ್ನ ಆಶಯ ಭಾಷಣ ಮಾಡಿದ ಡಾ. ಅಬ್ಬಾಸ ಮೇಲಿನಮನಿ, ಕಾವ್ಯಕ್ಕಿರುವ ಶಕ್ತಿ ಅಪಾರ. ಅಧಿಕಾರಶಾಹಿ, ರಾಜಕಾರಣಿಗಳ ವಿರುದ್ಧ, ಅಮಾನವೀಯ ಸಂಗತಿಗಳ ಕುರಿತಾಗಿ ಪ್ರಶ್ನಿಸುವ ಶಕ್ತಿ ಹಾಗೂ ತನ್ಮೂಲಕ ದಾರಿ ತಪ್ಪುತ್ತಿರುವವರನ್ನು ಸರಿದಾರಿಗೆ ತರುವ ತಾಕತ್ತು ಸಾಹಿತ್ಯಕ್ಕಿದೆ. ಅನ್ಯಾಯದ ವಿರುದ್ಧ ಹೋರಾಡಲು ಪ್ರೇರೇಪಿಸುವ ಶಕ್ತಿಯೂ ಕವನಕ್ಕಿದೆ ಎಂದರು.
ಪ್ರಶಸ್ತಿಗಾಗಿ ಕವನ ಬರೆದರೆ ಸಾಲದು. ರೋಗಗ್ರಸ್ತ ಸಮಾಜವನ್ನು ಸರಿದಾರಿಗೆ ತರುವ ಕವನಗಳು ರಚನೆಯಾಗಬೇಕು. ನವೋದಯದತ್ತ ಕೊಂಡೊಯ್ಯುವ, ಶೋಷಿತರ ದನಿಯಾಗುವ ಕಾವ್ಯಗಳು ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಸೆಯುವ ಕಾವ್ಯ ಕೂಡ ರಚನೆಯಾಗಬೇಕಿದೆ ಎಂದು ಆಶಯ ವ್ಯಕ್ತ ಪಡಿಸಿದರು.
ಕನ್ನಡಲ್ಲಿ 50 ಮಹಾಕಾವ್ಯ: ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಲತಾ ರಾಜಶೇಖರನ್ ಮಾತನಾಡಿ, ಸಾಮಾಜಿಕ ಚಿಂತನೆ, ಸ್ತ್ರೀಶೋಷಣೆ, ಸಾಮರಸ್ಯ ಬೆಸೆಯುವ ಕವನ ರಚನೆಗೆ ಒತ್ತು ನೀಡಬೇಕು ಎಂದರು.
ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯ ಪ್ರಕಾರ ಶ್ರೇಷ್ಠ. ಅದರಲ್ಲೂ ಕನ್ನಡ ಕಾವ್ಯ ವಿಶ್ವ ಗೌರವಕ್ಕೆ ಪಾತ್ರವಾಗಿದ್ದು, ಕನ್ನಡದಲ್ಲಿ ಮಾತ್ರ 50 ಮಹಾಕಾವ್ಯ ರಚನೆಯಾಗಿವೆ. ಕನ್ನಡ ಕಾವ್ಯವನ್ನು ಲಘುವಾಗಿ ಕಾಣುವ ವಿಕೃತ ಮನಸ್ಸುಗಳು ಈ ಸಂಗತಿಯನ್ನು ತಿಳಿಯಲಿ ಎಂದು ಹೇಳಿದರು.
ಡಾ. ಶಿವಪ್ಪ ಕುರಿ ಸ್ವಾಗತಿಸಿದರು. ಶೈಲಜಾ ಜಯಕುಮಾರ ನಿರೂಪಿಸಿದರು. ಕಾಂತರಾಜಪುರ ಸುರೇಶ ವಂದಿಸಿದರು.
-ಪ್ರಕಾಶ ಎಸ್. ಶೇಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.