ಆಲಮೇಲ ತಾಲೂಕು ಘೋಷಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ
ಆಲಮೇಲ: ಆಲಮೇಲ ಕೂಡಲೇ ತಾಲೂಕು ಕೇಂದ್ರವಾಗಬೇಕು. ಇಲ್ಲದಿದ್ದಲ್ಲಿ ಮುಂಬರುವ ವಿಧಾನ ಸಭಾ ಚುಣಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡುವುದಾಗಿ ಮತ್ತು ಆ ಭಾಗಕ್ಕೆ ಒಳಪಡುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಸಾಮೂಹಿಕ ರಾಜಿನಾಮೆ ನೀಡುವುದಾಗಿ ಬುಧವಾರ ಸಂಜೆ ಪಟ್ಟಣದ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಆಲಮೇಲ ತಾಲೂಕಾ ಹೋರಾಟ ಸಮಿತಿ ಹಾಗೂ ಜಿಪಂ ಮತ್ತು ತಾಪಂ ಸದಸ್ಯರು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸಿದ್ರಾಮ ಉಪ್ಪಿನ ಮಾತನಾಡಿ, ಆಲಮೇಲ ತಾಲೂಕಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಒಳಗೊಂಡಿದೆ. ರಾಜ್ಯ ಸರಕಾರ ಜಿಲ್ಲೆಯಲ್ಲಿ 7 ತಾಲೂಕಾ ಕೇಂದ್ರಗಳನ್ನು ಹೊಸದಾಗಿ ರಚಿಸಿದೆ ಆದರೆ ಆಲಮೇಲ ಪಟ್ಟಣವನ್ನು ಮಾತ್ರ ಸಂಪೂರ್ಣ ನಿರ್ಲಕ್ಷ್ಯಿಸಿದೆ.
ಆಲಮೇಲಕ್ಕೆ ನಾಯಕತ್ವದ ಕೊರತೆ ಮತ್ತು ಭೀಮಾತೀರದ ಹಂತಕರ ಪಟ್ಟಿಯಿಂದ ಇದು ಸಂಪೂರ್ಣ ನಿರ್ಲಕ್ಷಕ್ಕೆ ಕಾರಣವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸಾಧಿಕ ಸುಂಭಡ ಮಾತನಾಡಿ, ಆಲಮೇಲ ತಾಲೂಕಿಗಾಗಿ ನಿರಂತರವಾಗಿ ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ 107 ಜನರನ್ನು ಜೈಲಿಗೆ ಹಾಕಿದರು. ಆದರೂ ಹೋರಾಟಗಳು ಮುಂದುವರಿದಿತ್ತು ಎಂದ ಅವರು ಆಲಮೇಲನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿದ್ದಲ್ಲಿ ಗ್ರಾಮ ಪಂಚಾಯತಿಯ ಒಟ್ಟು 37 ಸದಸ್ಯರು ರಾಜಿನಾಮೆ ನೀಡಲು ಸಿದ್ದರಿದ್ದೇವೆ ಎಂದರು.
ಆಲಮೇಲ ತಾಲೂಕಾ ಹೋರಾಟ ಸಮಿತಿ ಸದಸ್ಯ ಶಿವಾನಂದ ಮಾರ್ಸನಳ್ಳಿ ಮಾತನಾಡಿದರು. ಶಿವುಕುಮಾರ ಗುಂದಗಿ, ಜಿಪಂ ಸದಸ್ಯ ಮಲ್ಲಪ್ಪ ತೋಡಕರ, ವಿಶ್ವನಾಥ ಬಡದಾಳ ಇದ್ದರು. ಆಲಮೇಲ ವಿರಕ್ತಮಠದ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಪ್ಪು ಶೆಟ್ಟಿ, ಅಶೋಕ ಕೋಳಾರಿ, ಗುಂಡು ಮೇಲಿನಮನಿ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.