ಪೈಪ್ಲೈನ್ಗೆ ಭೂಮಿ ನೀಡಲು ರೈತರ ವಿರೋಧ
ಬಸವನ ಬಾಗೇವಾಡಿ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದ ಬಳಿ ಕೇಂದ್ರ ಸರಕಾರದ ಎ್ಯ್ಟಿಪಿಸಿ ಸ್ಥಾಪಿಸುತ್ತಿರುವ ಶಾಖೋತ್ಪನ್ನ ಕೇಂದ್ರಕ್ಕೆ ನಾಲ್ಕು ಟಿಎಂಸಿ ನೀರು ಪೂರೈಕೆಗಾಗಿ ಆಲಮಟ್ಟಿಯಿಂದ ಕೂಡಗಿವರೆಗೆ ಸುಮಾರು 18 ಕಿ.ಮೀ. ಪೈಪ್ಲೈನ್ ಮಾಡಲು ಅಗತ್ಯ ಭೂಮಿಯನ್ನು ನೀಡಲು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಆಲಮಟ್ಟಿಯ ಸಮುದಾಯ ಭವನದಲ್ಲಿ ಗುರುವಾರ ನಡೆದ ಬಾಧಿತ ರೈತರ, ಎನ್.ಟಿ.ಪಿ.ಸಿ. ಅಧಿಕಾರಿಗಳ ಸಭೆಯಲ್ಲಿ ರೈತರು ವಿರೋಧಿಸಿದರು.
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಕೂಡಗಿ ವರೆಗೆ 18 ಕಿ.ಮೀ. ವರೆಗೆ ನೀರು ಒಯ್ಯಲು ಬೇನಾಳ, ವಂದಾಲ, ಹುಣಶ್ಯಾಳ ಪಿಸಿ, ಗುಡದಿನ್ನಿ, ಅಂಗಡಗೇರಿ ಗ್ರಾಮದ 200ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಅವೈಜ್ಞಾನಿಕ ನೀತಿಯಿಂದ ಪರಭಾರೆ ಮಾಡದೇ ಪೈಪಲೈನನ್ನು ಎನ್.ಟಿ.ಪಿ.ಸಿ. ಅಳವಡಿಸುತ್ತದೆ. ಈಗಾಗಲೇ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಈ ಭಾಗದ ರೈತರ ಲಕ್ಷಾಂತರ ಎಕರೆ ಭೂಮಿ ಕೃಷ್ಣಾರ್ಪಣವಾಗಿದೆ. ಅದಲ್ಲದೇ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನದಿಂದ ಮತ್ತೆ ಭೂಸ್ವಾಧಿನ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಇಷ್ಟೆಲ್ಲಾ ಭೂಸ್ವಾಧಿನ ನಡೆಸುತ್ತಿದ್ದರೂ ಈಗ ಕೂಡಗಿಗೆ ನೀರು ಪೂರೈಸಲು ಪುನಃ ಭೂಮಿ ನೀಡಲು ಸಾಧ್ಯವಿಲ್ಲ ಎಂದು ರೈತರು ಒಕ್ಕೊರಲಿನಿಂದ ಒತ್ತಾಯಿಸಿದರು.
ಆಲಮಟ್ಟಿ ಜಲಾಶಯದಿಂದ ನಾಲ್ಕು ಟಿ.ಎಂ.ಸಿ.ಯಷ್ಟು ನೀರು ಪ್ರತಿ ವರ್ಷ ಕೂಡಗಿಯ ಎನ್.ಟಿ.ಪಿ.ಸಿಗೆ ಪೂರೈಸುವುದಾಗಿ ರಾಜ್ಯ ಸರಕಾರ ಹೇಳಿದ್ದು, ಆ ಪ್ರಕಾರ ನೀರು ಪೂರೈಸಲು ಅಗತ್ಯ ಪೈಪಲೈನ್ ಮಾಡಬೇಕಿದೆ. ಆಲಮಟ್ಟಿಯಿಂದ ಕೂಡಗಿವರೆಗೆ 18 ಕಿ.ಮೀ. ಉದ್ದದವರೆಗೆ 60 ಮೀ ಅಗಲದ ಭೂಮಿಯ ಅಗತ್ಯವಿದ್ದು, ಒಟ್ಟಾರೆ 200 ಎಕರೆಯಷ್ಟು ಭೂಮಿ ಅವರಿಗೆ ಅಗತ್ಯವಾಗಿದೆ. 60 ಮೀ ಅಗಲ, 12 ಅಡಿ ಆಳದಲ್ಲಿ ಪೈಪಲೈನ್ ಅಳವಡಿಸಿ ಎಡಬದಿ ಮತ್ತು ಬಲಬದಿಯಲ್ಲಿ ಪ್ರತಿ 300 ಮೀಟರ್ಗೆ ಒಂದರಂತೆ ವಿದ್ಯುತ್ ಗೋಪುರ ಅಳವಡಿಸಲಾಗುವುದು. ಅಲ್ಲಿಂದ ಆಲಮಟ್ಟಿಯಿಂದ ನೀರನ್ನು ಒಯ್ಯಲಾಗುವುದು ಎಂದು ಎನ್.ಟಿ.ಪಿ.ಸಿ. ಜನರಲ್ ಮ್ಯಾನೇಜರ್ ಸಾಮಂತ ಹೇಳಿದರು.
ಕೃಷ್ಣಾ ತೀರ ಮುಳುಗಡೆ ಸಂತ್ರಸ್ಥರ ಕ್ಷೇಮಾಭಿವೃದ್ಧಿ ಸಂಸ್ಥೆ ಸಂಚಾಲಕ ಜಿ.ಸಿ. ಮುತ್ತಲದಿನ್ನಿ, ಡಾ ಎಂ.ಎಸ್. ಪಾಟೀಲ, ಎಸ್.ಎಸ್. ಪಾಟೀಲ, ಬಿ.ಎಚ್. ಗಣಿ ಮಾತನಾಡಿ, ಈಗಾಗಲೇ ನಾವು ಆಲಮಟ್ಟಿ ಜಲಾಶಯಕ್ಕೆ ಶೇ. 80ರಷ್ಟು ಭೂಮಿ ಕಳೆದುಕೊಂಡಿರುತ್ತೇವೆ. ಈಗ ಮತ್ತೆ ಈ ಪೈಪ್ಲೈನ್ಗೆ ಭೂಮಿ ನೀಡಲು ನಾವು ತಯಾರಿಲ್ಲ. ಉದ್ದೇಶಿಸಿತ ಪೈಪ್ಲೈನ್ ರಸ್ತೆ ಬೇರೆಡೆ ಸ್ಥಳಾಂತರಿಸಿ, ಇದ್ದಂತಹ ಅಲ್ಪಸ್ವಲ್ಪ ಭೂಮಿ ನಮಗೆ ಉಳಿಸಿಕೊಡಬೇಕು ಎಂದರು. ತಹಸೀಲ್ದಾರ ಅಪರ್ಣಾ ಪಾವಟೆ ಮಾತನಾಡಿ, ರೈತರ ಭೂಮಿ ವಶಪಡಿಸಿಕೊಳ್ಳುವುದಿಲ್ಲ. ಬದಲಾಗಿ ಭೂಮಿ ಅಗೆದು ಪೈಪ್ ಅಳವಡಿಸಿ ಮತ್ತೆ ಭೂಮಿ ಯಥಾ ಪ್ರಕಾರ ಮಾಡಿಕೊಡಲಾಗುವುದು. ಈ ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷಗಳಾಗಲಿದ್ದು, ಅಷ್ಟು ದಿನಗಳ ಕಾಲ ಕೇವಲ ಬೆಳೆ ಪರಿಹಾರ ಮಾತ್ರ ನೀಡಲಾಗುವುದು ಎಂದು ತಿಳಿಸಿದರು. ಸಭೆಗೂ ಮುನ್ನ ರೈತರಿಂದ ಬಿಳಿ ಹಾಳೆ ಮತ್ತು ಭೂಸ್ವಾಧೀನ ಪತ್ರದ ಮೇಲೆ ಸಹಿ ಸಂಗ್ರಹಿಸಿದ್ದ ಕೆಲ ಅಧಿಕಾರಿಗಳ ವಿರುದ್ಧ ವಿರೋಧ ವ್ಯಕ್ತವಾದ್ದರಿಂದ ತಹಸೀಲ್ದಾರ ಪಾವಟೆ ತಮ್ಮ ಗಮನಕ್ಕೆ ಬಾರದೇ ಹೇಗೆ ಸಹಿ ಸಂಗ್ರಹಿಸಿದ್ದೀರಿ ಎಂದು ಗ್ರಾಮ ಲೆಕ್ಕಾಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.