ಮಕ್ಕಳನ್ನು ಕೊಲೆ ಮಾಡಿ ತಾಯಿ ಆತ್ಯಹತ್ಯೆ
ಸಿಂದಗಿ: ಕ್ಷುಲಕ ಕಾರಣಕ್ಕಾಗಿ ಮನನೊಂದು ಮನೆ ಬಿಟ್ಟು ಬಂದ ಗುಲ್ಬರ್ಗ ತಾಲೂಕಿನ ಕೊಳ್ಳೂರು ಗ್ರಾಮದ ಭಾಗಮ್ಮ ಗುಂಡುರಾವ ಪಾಟೀಲ(26) ಎಂಬ ಆರು ತಿಂಗಳ ಗರ್ಭಿಣಿ ತನ್ನ ಇಬ್ಬರು ಮಕ್ಕಳೊಂದಿಗೆ ಪಟ್ಟಣದ ಕೆರೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಬುಧವಾರ ಜರುಗಿದೆ.
ಭಾಗಮ್ಮಳ ದೇಹ ಪಟ್ಟಣದ ಕೆರೆಯಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾದರೆ, ಆಕೆ ಮಕ್ಕಳಾದ ಕಾರ್ತಿಕ್(4) ಮತ್ತು ಕಿರಣ (2) ಈವರ ದೇಹ ಗುರುವಾರ ಪತ್ತೆಯಾಗಿದೆ. ಈ ಕುರಿತು ಮೃತಳ ಗಂಡ ಗುಂಡುರಾವ ಕನ್ನಡಪ್ರಭದೊಂದಿಗೆ ಮಾತನಾಡಿ, ಫೆ. 12ರಂದು ಬೆಳಗ್ಗೆ ಮನೆಯವರೆಲ್ಲ ತೋಟಕ್ಕೆ ಹೋಗಿದ್ದೆವು. ಹೋಗುವ ಮುನ್ನ ಅವಳೊಂದಿಗೆ ಅಡುಗೆ ವಿಚಾರದಲ್ಲಿ ಕೊಂಚ ವಾದವಾಗಿದ್ದು, ಹೊರತುಪಡಿಸಿದರೆ ಈವರೆಗೂ ಯಾವುದೇ ರೀತಿಯ ಜಗಳವಾಗಿರಲಿಲ್ಲ. ಮಧ್ಯಾಹ್ನ ಮನೆಯಲ್ಲಿ ಹೆಂಡತಿ, ಮಕ್ಕಳು ಕಾಣದ್ದರಿಂದ ಮನೆಯವರೆಲ್ಲ ಎಲ್ಲೆಡೆ ಹುಡುಕಾಟ ಆರಂಭಿಸಿದೆವು. ಸಿಂದಗಿಯಲ್ಲಿದ್ದ ಅವಳ ಅಕ್ಕ ನಾಗಮ್ಮಳಿಗೆ ಫೋನ್ ಮಾಡಿದಾಗ ಅಲ್ಲಿಯೂ ಕೂಡಾ ಹೋಗಿಲ್ಲವೆಂಬುದು ಸ್ಪಷ್ಟವಾಯಿತು.
ಫೆ. 13ರಂದು ಸಿಂದಗಿ ಕೆರೆಯಲ್ಲಿ ಮೃತದೇಹ ಪತ್ತೆಯಾಗಿರುವ ವಿಷಯ ತಿಳಿಯಿತು. ಅವಳೊಂದಿಗೆ ಮಕ್ಕಳು ಕಾಣದ್ದರಿಂದ ಫೆ. 14ರಂದು ಬೆಳಗಿನ ಜಾವದಿಂದಲೇ ಕುಟುಂಬ ವರ್ಗದವರೊಂದಿಗೆ ಕೆರೆಯ ಬಳಿ ನಿಂತಾಗ ಮಕ್ಕಳ ಶವ ಪತ್ತೆಯಾಗಿದೆ ಎಂದು ವಿವರಿಸಿದರು. ಮೃತಳ ತಾಯಿ ರಾಚಮ್ಮ ಶಿವರಣಪ್ಪ ಯಡ್ರಾಮಿ, ಸಹೋದರ ಶಿವಾನಂದ ಶಿವಶರಣಪ್ಪ ಯಡ್ರಾಮಿ ಸಿಂದಗಿ ಠಾಣೆಯಲ್ಲಿ ದೂರು ನೀಡಿದ್ದು, ಪಿಎಸೈ ಮಂಜುನಾಥ ಕುಸುಗಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.