ರು. 131 ಕೋಟಿ ಸಾಲ ಮರು ಪಾವತಿಯಾಗಿಲ್ಲ
ಬಿಜಾಪುರ: ರಾಜ್ಯದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ರು. 131 ಕೋಟಿ ಸಾಲ ಮರು ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ ಎಂದು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಗಸ್ತಿ ತಿಳಿಸಿದರು.
ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ರಾಜ್ಚದಲ್ಲಿ 1979ರಿಂದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ರು. 131 ಕೋಟಿ ಸಾಲ ಮರು ಪಾವತಿಯಾಗದೇ ಬಾಕಿ ಇದೆ. ಸಿಬ್ಬಂದಿ ಕೊರತೆಯಿಂದಾಗಿ ಸಾಲ ವಸೂಲಾತಿಗೆ ತೊಂದರೆಯಾಗುತ್ತಿದೆ. 250 ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಸದ್ಯ ಇಲಾಖೆಯಲ್ಲಿ ಕಾಯಂ 85, ತಾತ್ಕಾಲಿಕ 15 ಸಿಬ್ಬಂದಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಪ್ರಸಕ್ತ ಬಜೆಟ್ಗೆ ಮುಂಚೆ ನಿಗಮಕ್ಕೆ ಹೆಚ್ಚಿನ ಹಣ ಒದಗಿಸಬೇಕು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಯೋಜನಾ ಇಲಾಖೆಯಿಂದ ರು. 200 ಕೋಟಿ, ಶೇರು ಬಂಡವಾಳ ರು. 30 ಕೋಟಿ, ಸಹಾಯಧನ ರು. 17 ಕೋಟಿ, ಗಂಗಾ ಕಲ್ಯಾಣ ಯೋಜನೆಗೆ ರು. 95 ಕೋಟಿ, ಕುಶಲಕರ್ಮಿಗಳು ಮತ್ತು ವೃತ್ತಿದಾಯಕ ಗುಂಪುಗಳಿಗೆ ರು. 58 ಕೋಟಿ ಕಿರು ಸಾಲ ಯೋಜನೆ ಅಡಿ ಸಾಲದ ರೂಪದಲ್ಲಿ ರು. 10,000 ಹಾಗೂ ಸಬ್ಸಿಡಿ ರು. 10,000 ಈ ಬಜೆಟ್ನಲ್ಲಿ ನಿಗದಿಯಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆ ಅಡಿ ಪ್ರತಿ ವಿಧಾನಸಭೆ ಮತ ಕ್ಷೇತ್ರದಲ್ಲಿ 19 ವೈಯಕ್ತಿಕ ಕೊಳವೆ ಬಾವಿ, 3 ಸಾಮೂಹಿಕ ಕೊಳವೆ ಬಾವಿ ಕೊರೆಸಲು ಅವಕಾಶವಿದೆ. 2011-12ರವರೆಗೆ ರಾಜ್ಯದಲ್ಲಿ 21,858 ಕೊಳವೆ ಬಾವಿ ಕೊರೆಸಲಾಗಿದೆ. 14,225 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 7,633 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಯಬೇಕಿದೆ. ಇದಕ್ಕೆ 139 ಕೋಟಿ ಅಗತ್ಯವಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
15,000 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ: ಬಜೆಟ್ನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ಅಭಿವೃದ್ಧಿ ನಿಗಮ ಸೇರಿ 15,000 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಹಣ ನಿಗದಿಪಡಿಸಲಾಗಿದೆ. ಈ ಪೈಕಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 5,000 ಕೊಳವೆ ಭಾವಿಗಳಿಗೆ ವಿದ್ಯುತ್ ಸಂಪರ್ಕ ಕಸ್ಪಿಸಲು ರು. 65 ಕೋಟಿ ಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.
ಬಿಜಾಪುರ ಜಿಲ್ಲೆಯಲ್ಲಿ ಇದುವರೆಗೆ 1,010 ಕೊಳವೆ ಭಾವಿಗಳಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ 578 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 431 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ್ ಕಲ್ಪಿಸಬೇಕಿದೆ. ಹೆಸ್ಕಾಂನಲ್ಲಿ 339 ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಇಲಾಖೆಯಲ್ಲಿ 3 ಇತ್ಯರ್ಥವಾಗಿಲ್ಲ. ಈ ಅರ್ಜಿಗಳ ವಿಲೇವಾರಿಗೆ ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗಂಗಾಕಲ್ಯಾಣ ಯೋಜನೆಗೆ ಇದುವರೆಗೆ ರು. 1ಲಕ್ಷ ಸಬ್ಸಿಡಿ ಇತ್ತು. ಅದೀಗ ಪ್ರಸಕ್ತ ಬಜೆಟ್ನಲ್ಲಿ ರು. 2 ಲಕ್ಷ ಗೆ ಏರಿಕೆಯಾಗಿದೆ. 1979ರಲ್ಲಿ ನಿಗಮ ಪ್ರಾರಂಭವಾಗಿದೆ. 2008ರ ವರೆಗೆ 2,67,427 ಜನರು ಸಾಲ ಪಡೆದಿದ್ದಾರೆ. 94,106 ಜನ ಸಾಲ ಮರುಪಾವತಿ ಮಾಡಿದ್ದಾರೆ. ಒಂದೇ ಸಮಯಕ್ಕೆ ಸಾಲದ ಅಸಲು ಮರುಪಾವತಿ ಮಾಡಲು ಮುಂದೆ ಬರುವ ಫಲಾನುಭವಿಗಳಿಗೆ ಬಡ್ಡಿಯನ್ನು ಮನ್ನಾ ಮಾಡಲಾಗುವುದು. ರು. 84 ಕೋಟಿ ಬಡ್ಡಿಯೇ ಆಗುತ್ತದೆ ಎಂದರು.
ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ರು. 65 ಕೋಟಿ ಘೋಷಣೆ ಮಾಡಲಾಗಿದೆ. 25 ಕೋಟಿ ಕಲ್ಯಾಣ ಇಲಾಖೆಯಿಂದ ನಿಗಮಕ್ಕೆ ಬರುತ್ತದೆ ಎಂದು ತಿಳಿಸಿದರು.
ಬಿಜಾಪುರ ಜಿಲ್ಲೆಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಇಂಡಿ ತಾಲೂಕಿನ ಬರಡೋಲದಲ್ಲಿ ಗೋಂಧಳಿ, ಗೊಲ್ಲರ ಸಮಾಜದ 3 ಜನರು ಖುಷ್ಕಿ ಭೂಮಿ ಖರೀದಿಸಲು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಒಬ್ಬ ರೈತ ಭೂಮಿ ಕೊಡಲು ಸಿದ್ಧರಿದ್ದಾರೆ. 3 ಜನರಿಗೆ ತಲಾ ಎರಡು ಎಕರೆ ಜಮೀನು ಖರೀದಿಸಿ ವಿತರಣೆ ಮಾಡಲಾಗುವುದು. ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ ರು. 5 ಲಕ್ಷ ನೀಡಲಿದೆ. ಈ ಪೈಕಿ ರು. 2.5 ಲಕ್ಷ ಸಬ್ಸಿಡಿ ನೀಡಲಾಗುವುದು. 10 ವರ್ಷದ ಅವಧಿವಯೊಳಗೆ ಸಾಲ ಮರುಪಾವತಿ ಮಾಡಲು ಅವಕಾಶವಿದೆ ಎಂದರು.
ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ ಶೈಕ್ಷಣಿಕ ಸಾಲ ಯೋಜನೆಯನ್ನು ಹೊಂದಿದೆ. ಪ್ರೊಫೆಷನಲ್ ಕೋರ್ಸ್ಗೆ ನೆರವು ಕೋರಿ 10 ಅರ್ಜಿಗಳು ಬಂದಿದ್ದವು. 6 ಅರ್ಜಿಗಳಿಗೆ ಶಿಫಾರಸು ಮಾಡಲಾಗಿದೆ. 1 ಅರ್ಜಿ ಮಂಜೂರಾಗಿದೆ. ರು. 2.5 ಲಕ್ಷ ಸಾಲವನ್ನು ಶೇ. 4ರ ಬಡ್ಡಿದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಬಿಜಾಪುರ ಜಿಲ್ಲಾ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಗೌಂಡಿ ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.