ಬಸ್ಗಾಗಿ ಕಾಯಬೇಡಿ; ಪುಸ್ತಕ ಓದಿಬಿಡಿ!
ಬಿಜಾಪುರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಿಜಾಪುರ ವಿಭಾಗವು ಈಗ ಬರೀ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸುವುದು ಹಾಗೂ ಕೊಂಡೊಯ್ಯುವುದಕ್ಕಷ್ಟೇ ಸೀಮಿತವಾಗಿಲ್ಲ. ಪ್ರಯಾಣಿಕರಿಗೆ ಜ್ಞಾನ ದಾಸರೋಹ ಮಾಡುತ್ತಿದೆ. ಅಂದರೆ, ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಾರ್ವಜನಿಕ ಗ್ರಂಥಾಲಯನ್ನು ತೆರೆದಿದೆ.
ಬಸ್ ಬರುವುದು ತಡವಾದರೆ ಇಲ್ಲಿನ ಪ್ರಯಾಣಿಕರು ಸಿಡಿಮಿಡಿಗೊಳ್ಳುವುದಿಲ್ಲ. ಬೇಸರವೂ ಮಾಡಿಕೊಳ್ಳುವುದಿಲ್ಲ. ಬಸ್ಸಿಗಾಗಿ ಕಾಯುವ ಪ್ರಯಾಣಿಕರ ಸಮಯ ಸದ್ವಿನಿಯೋಗಕ್ಕಾಗಿ ಬಸ್ ನಿಲ್ದಾಣದಲ್ಲೇ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸಿರುವುದೇ ಇದಕ್ಕೆ ಪ್ರಮುಖ ಕಾರಣ.
ತಮ್ಮೂರಿಗೆ ತೆರಳಬೇಕಾದ ಪ್ರಯಾಣಿಕರು ಬಸ್ ತಡವಾಗಿದ್ದಕ್ಕೆ ಬೇಸತ್ತು ಸಾರಿಗೆ ಸಂಸ್ಥೆಗೆ ಹಿಡಿ ಶಾಪ ಹಾಕುತ್ತ ಬಸ್ ನಿಲ್ದಾಣದಲ್ಲಿ ತಿರುಗುತ್ತಿದ್ದರು. ಸದ್ಯ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸಿದ್ದರಿಂದ ಪ್ರಯಾಣಿಕರ ಹಿಡಿ ಶಾಪದಿಂದ ಬಚಾವ್ ಆಗಿ ಸಾರಿಗೆ ಸಂಸ್ಥೆ ಮುಕ್ತಿ ಪಡೆದು ಮಾದರಿ ಬಸ್ ನಿಲ್ದಾಣವಾಗಿ ಮಾರ್ಪಟ್ಟಿದೆ.
ಬಸ್ ಬರುವ ನಿರ್ದಿಷ್ಟ ಸಮಯವನ್ನು ತಿಳಿದುಕೊಂಡ ಪ್ರಯಾಣಿಕರು ಇಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ದಾಪುಗಾಲು ಹಾಕುತ್ತಿದ್ದಾರೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9 ಗಂಟೆ ವರೆಗೆ ಗ್ರಂಥಾಲಯ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿರುತ್ತದೆ. ದಿನಪತ್ರಿಕೆಗಳು ಸೇರಿದಂತೆ ಹೆಸರಾಂತ ಕವಿ, ಸಾಹಿತಿಗಳು ರಚಿತ ಪುಸ್ತಕಗಳು ಓದುಗರಿಗೆ ಇಲ್ಲಿ ದೊರೆಯುತ್ತವೆ. ಪ್ರಯಾಣಿಕರು ತಮ್ಮ ಬಸ್ ಬರುವವರೆಗೂ ಓದಬಹುದು. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು, ಚಾಲಕರು, ನಿರ್ವಾಹಕರು ತಮ್ಮ ಅಲ್ಪ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಈ ಗ್ರಂಥಾಲಯ ಸಹಕಾರಿಯಾಗಿದೆ.
ಗುಮ್ಮಟ ನಗರಕ್ಕೆ ಮತ್ತೊಂದು ಗರಿ: ಬಸ್ ನಿಲ್ದಾಣದ ಎದುರಿನ ಆವರಣದಲ್ಲಿ ಹಚ್ಚ ಹಸಿರಿನ ಉದ್ಯಾನದ ಮಧ್ಯದಲ್ಲಿ ಬೆಟ್ಟದಿಂದ ಧುಮ್ಮಿಕ್ಕುವ ಜಲಪಾತ, ಸುತ್ತಲೂ ಚಿಗರೊಡೆಯುತ್ತಿರುವ ಸಸಿಗಳು, ಬಸ್ ನಿಲ್ದಾಣದ ಕಟ್ಟಡಕ್ಕೆ ಸುತ್ತಲೂ ನೀಲಿ, ಹಳದಿ, ಕೇಸರಿ ಬಣ್ಣದ ಎಸಿಪಿ (ಅಲ್ಯುಮಿನಿಯಂ ಕಂಪೋಜ್ ಪ್ಲೇಟ್ ಕೋಟ್) ಕವಚ ಪ್ರಯಾಣಿಕರನ್ನು ಮೋಡಿ ಮಾಡುತ್ತಿದೆ.
ಬಸ್ ನಿಲ್ದಾಣದಲ್ಲಿ ಸಿಸಿ ಬೆಡ್ ಹಾಕಿದ್ದರಿಂದ ಧೂಳು ಮಾಯವಾಗಿ ಸ್ವಚ್ಛತೆಯಿಂದ ನಳನಳಿಸುತ್ತಿದೆ. ಹೈಟೆಕ್ ಬಸ್ ನಿಲ್ದಾಣ ಐತಿಹಾಸಿಕ ಗುಮ್ಮಟ ನಗರಕ್ಕೆ ಮತ್ತೊಂದು ಗರಿಯಾಗಿ ಮೂಡಿದ್ದು ಹೆಮ್ಮೆಯ ಸಂಗತಿ ಎಂದು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
- ಪರಶುರಾಮ ಶಿವಶರಣ