ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ಪಂಚಾಯ್ತಿಗೂ ಇಲ್ಲ, ನಗರಸಭೆಗೂ ಇಲ್ಲ

Parashurama
Updated On : 22 Feb 2013, 11:03 am

ಬಿಜಾಪುರ: ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಇಲ್ಲದೇ, ನಗರಸಭೆ ವ್ಯಾಪ್ತಿಗೂ ಸೇರದೆ, ತ್ರಿಶಂಕು ಸ್ಥಿತಿಯಲ್ಲಿದೆ!
ಹೌದು. ನಗರದ ಹೊರವಲಯದಲ್ಲಿರುವ ತೊರವಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಯೂ ಇಲ್ಲ, ಅತ್ತ ಅಭಿವೃದ್ಧಿಯೂ ಕಾಣದೆ ಅತಂತ್ರವಾಗಿದೆ.
ಗ್ರಾಪಂ ಕೇಂದ್ರವಾದ ತೊರವಿ ಬಿಜಾಪುರದಿಂದ ಪಶ್ಚಿಮ ದಿಕ್ಕಿಗೆ ಕೇವಲ 6 ಕಿ.ಮೀ. ದೂರದಲ್ಲಿದೆ. 1999-2000ರಲ್ಲಿ ಗ್ರಾಪಂಗೆ ಚುನಾವಣೆ ನಡೆದಿತ್ತು. ನಂತರ ಇಲ್ಲಿ ಗ್ರಾಪಂ ಅಥವಾ ನಗರ ಸ್ಥಳೀಯ ಸಂಸ್ಥೆ ಚುನಾವಣೆಯೇ ನಡೆದಿಲ್ಲ.
ತೊರವಿ, ತೊರವಿ ತಾಂಡಾ ನ.1,2,3,4, ನವರಸಪುರ, ಅತ್ತಾಲಟ್ಟಿ, ಅತ್ತಾಲಟ್ಟಿ ತಾಂಡಾ ವ್ಯಾಪ್ತಿ ಸೇರಿದಂತೆ 22 ಸದಸ್ಯ ಬಲವನ್ನು ಈ ಗ್ರಾಪಂ ಹೊಂದಿತ್ತು. 2005ರಲ್ಲಿ ಎಲ್ಲ ಗ್ರಾಪಂಗಳಿಗೆ ಚುನಾವಣೆ ನಡೆದಂತೆ ಈ ಗ್ರಾಪಂಗೂ ಚುನಾವಣೆ ನಡೆಯಬೇಕಿತ್ತು. ಆದರೆ, ಬಿಜಾಪುರ ನಗರಸಭೆ ವ್ಯಾಪ್ತಿಗೆ ಈ ಗ್ರಾಮವನ್ನು ಸೇರಿಸಬೇಕೆಂದು ಚುನಾವಣೆ ನಡೆಯಲಿಲ್ಲ.
2010ರಲ್ಲಿ ತೊರವಿ, ನವರಸಪುರ ಗ್ರಾಮಗಳನ್ನು ಬಿಜಾಪುರ ನಗರಸಭೆ ವಾರ್ಡ್ ನ. 36, 37 ಎಂದು ವಿಂಗಡಿಸಲು ನಿರ್ಧರಿಸಲಾಗಿತ್ತು. ಆದರೆ, ಗ್ರಾಮಸ್ಥರು 'ಬಿಜಾಪುರ ನಗರಸಭೆಗೆ ಗ್ರಾಮ ಸೇರಿದರೆ ತೆರಿಗೆ ಹೊರೆಯಾಗುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿಯೇ ಇರಲಿ' ಎಂದು ಬೀದಿಗಿಳಿದು ಹೋರಾಡಿದ್ದರು. ಈ ಕುರಿತು ಸರ್ಕಾರ, ಪಂಚಾಯಿತಿ ರಾಜ್ ಇಲಾಖೆ, ಪೌರಾಡಳಿತ ಇಲಾಖೆಗೂ ಮನವಿ ಸಲ್ಲಿಸಲಾಗಿತ್ತು. ತಮ್ಮ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಹಿನ್ನೆಲೆಯಲ್ಲಿ ಜನಗಣತಿಯೂ ಸರಿಯಾಗಿ ಆಗಿಲ್ಲ ಎಂದು ದೂರು ಸಲ್ಲಿಸಿದ್ದರು. ಹೀಗಾಗಿ ತೊರವಿಯನ್ನು ಬಿಜಾಪುರ ನಗರಸಭೆಗೆ ಸೇರಿಸುವ ವಿಚಾರವನ್ನೇ ಕೈ ಬಿಡಲಾಯಿತು.
ವಿಚಿತ್ರವೆಂದರೆ ಲೋಕಸಭೆ, ವಿಧಾನಸಭೆ, ಜಿಪಂ, ತಾಪಂ ಚುನಾವಣೆಗಳು ಈ ಗ್ರಾಮದಲ್ಲಿ ನಡೆಯುತ್ತವೆ. ಆದರೆ ಗ್ರಾಪಂ ಚುನಾವಣೆ ಮಾತ್ರ ನಡೆಯೋಲ್ಲ. 2010ರಲ್ಲಿ ತೊರವಿ ಗ್ರಾಪಂಗೆ ಅತ್ತಾಲಟ್ಟಿ, ಅತ್ತಾಲಟ್ಟಿ ತಾಂಡಾದ ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆದು, ಆರು ಮಂದಿ ಚುನಾಯಿತರಾಗಿದ್ದು, ಇವರಲ್ಲಿ ಒಬ್ಬರು ಅಧ್ಯಕ್ಷರು, ಇನ್ನೊಬ್ಬರು ಉಪಾಧ್ಯಕ್ಷರು, ಉಳಿದ ನಾಲ್ವರು ಸದಸ್ಯರು. ಈಗ ತೊರವಿ ಗ್ರಾಪಂ ರಾಜ್ಯದ 6,900 ಗ್ರಾಪಂಗಳಲ್ಲಿಯೇ ಅತ್ಯಂತ ಚಿಕ್ಕದ್ದು ಎನಿಸಿಕೊಂಡಿದೆ.
ಗ್ರಾಪಂ ಕಾರ್ಯಾಲಯವಿದೆ: ಈ ಗ್ರಾಮದಲ್ಲಿ ಗ್ರಾಪಂ ಕಾರ್ಯಾಲಯವಿದೆ. ಆದರೆ ತೊರವಿ ಗ್ರಾಮಸ್ಥರಲ್ಲಿ ಒಬ್ಬರೂ ಸದಸ್ಯರಿಲ್ಲ. ಅತ್ತಾಲಟ್ಟಿ, ಅತ್ತಾಲಟ್ಟಿ ತಾಂಡಾದ ಸದಸ್ಯರಿಗೆ ಮಾತ್ರ ಗ್ರಾಪಂ ಮೂಲಕ ವಾರ್ಷಿಕ 13 ಲಕ್ಷ ಅನುದಾನ ಬರುತ್ತದೆ. ಪರಸ್ಪರ ತಿಳವಳಿಕೆಯಿಂದ ಅರ್ಧ ತೊರವಿ ಗ್ರಾಮಕ್ಕೆ ಹಾಗೂ ಇನ್ನರ್ಧ ಅತ್ತಾಲಟ್ಟಿ, ಅತ್ತಾಲಟ್ಟಿ ತಾಂಡಾಕ್ಕೆ ಅನುದಾನ ಹಂಚಲಾಗುತ್ತಿದೆ. ಅತ್ಯಲ್ಪ ಹಣದಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲದಂತಾಗಿದೆ. ಆದರೆ, ಈ ಗ್ರಾಮಸ್ಥರು ಗ್ರಾಪಂಗೆ ನೀರು, ಭೂಮಿ ಕರ ಕಟ್ಟಿತ್ತಿದ್ದು, ಅತ್ಯಲ್ಪ ಹಣ ಸಂಗ್ರಹವಾಗುತ್ತಿದೆ.
ಎರಡು ವಿಧಾನಸಭೆ ವ್ಯಾಪ್ತಿ: ತೊರವಿ ಬಿಜಾಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ಬಿಜಾಪುರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಶಾಸಕರ ನಿಧಿಯಿಂದ ಹಣಕ್ಕಾಗಿ ಮೊರೆ ಇಡಬೇಕಾಗಿದೆ. ಅತ್ತಾಲಟ್ಟಿ, ಅತ್ತಾಲಟ್ಟಿ ತಾಂಡಾ ಬಬಲೇಶ್ವರ ವಿಧಾನಸಭೆ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದಾಗಿ ಆ ಗ್ರಾಮಸ್ಥರು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲರಿಗೆ ಶಾಸಕರ ಅನುದಾನಕ್ಕೆ ಮನವಿ ಮಾಡಿಕೊಳ್ಳಬೇಕಿದೆ. ಉಭಯ ಶಾಸಕರು ತಮ್ಮ ಅನುದಾನದಲ್ಲಿ ಸಾಧ್ಯವಾದಷ್ಟು ತೊರವಿ ಗ್ರಾಪಂಗೆ ನೀಡಿದರೂ, ಅಭಿವೃದ್ಧಿ ಕಾಣುತ್ತಿಲ್ಲ.
ಕಾರಣವೇನು?: 2001ರ ಜನಗಣತಿಯಂತೆ ಈ ಪ್ರದೇಶವನ್ನು ನಗರದ ಹೊರವಲಯದ ಬೆಳವಣಿಗೆ (ಔಟರ್ ಗ್ರೋಥ್) ಎಂದು ಪರಿಗಣಿಸಿ ಇದನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ ಇಲ್ಲಿ ಜನಗಣತಿಯೇ ಸರಿಯಾಗಿ ಆಗಿಲ್ಲ.
- ರುದ್ರಪ್ಪ ಆಸಂಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement