ಬಂಥನಾಳ ಸಂಗನಬಸವ ಶಿವಯೋಗಿಗಳ ಸ್ಮರಣೆ
ಬಿಜಾಪುರ: ಬಂಥನಾಳ ಶಿವಯೋಗಿಗಳ ಶೈಕ್ಷಣಿಕ ಕಾಳಜಿಯಿಂದಾಗಿ ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ ಎಂದು ರಾಜ್ಯ ಮಾನವ ಹಕ್ಕುಗಳ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅವರು ಹೇಳಿದರು.
ಮಾಸಿಕ ಶಿವಾನುಭವ ಗೋಷ್ಠಿಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ನಗರದ ಬೆಂಡಿಗೇರಿ ಓಣಿಯ ಪವಾಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಜ್ಞಾನ ದಾಸೋಹಿ ಬಂಥನಾಳ ಸಂಗನಬಸವ ಶಿವಯೋಗಿಗಳ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಂಥನಾಳ ಶಿವಯೋಗಿಗಳ ಜೀವನ ಚರಿತ್ರೆಯು ನಮಗೆಲ್ಲರಿಗೂ ಮಾದರಿಯಾಗಿದೆ. ಬಂಥನಾಳ ಶಿವಯೋಗಿಗಳು ಬಿಜಾಪುರ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೆ ಶಾಲೆಯನ್ನು ಪ್ರಾರಂಭಿಸಲು ಪ್ರೇರಣೆ ನೀಡಿದರು. ಶಿವಾನುಭವದ ಪ್ರವಚನ ನೀಡುತ್ತ ಶಿವಯೋಗಿಗಳು ಬಸವ ಧರ್ಮದ ಚಿಂತನೆಗಳನ್ನು ಮಾಡಿದರು ಎಂದರು.
ಸಾನ್ನಿಧ್ಯ ವಹಿಸಿದ್ದ ಯರನಾಳ ಸಂಗನಬಸವ ಸ್ವಾಮಿ ಮಾತನಾಡಿ, ಬಂಥನಾಳದ ಶಿವಯೋಗಿಗಳು ಸರಳ ಜೀವನಕ್ಕೆ ಮಹತ್ವ ನೀಡಿದವರು. ಎಲ್ಲ ಗ್ರಾಮಗಳಲ್ಲಿ ಶಿವಾನುಭವ ಮತ್ತು ಪ್ರವಚನ ಮಾಡಿ ಜನರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರೀತಿ ಬೆಳೆಯುವಂತೆ ಮಾಡಿದರು ಎಂದರು.
ಮುಖ್ಯ ಅತಿಥಿಗಳಾಗಿ ಚಿಕ್ಕಯ್ಯ ನಂದಿಕೋಲಮಠ, ಪ್ರೊ. ಯು.ಎನ್. ಕುಂಟೋಜಿ, ಮಹಾದೇವ ಕುರೆ ಮುಂತಾದವರು ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಎಸ್.ಜೆ. ಇಜೇರಿ ವಹಿಸಿದ್ದರು.
ಎಸ್.ಎಂ. ದೊಡಮನಿ, ಶಂಕರ ಸಾಹುಕಾರ, ಶಂಕ್ರಯ್ಯ ಮಠ, ಪ್ರೊ. ಶರಣಗೌಡ ಪಾಟೀಲ, ಪ್ರೊ. ಸುಭಾಷ ಕನ್ನೂರ, ಎಂ.ಜಿ. ಕೊಟ್ಯಾಳ, ಆರ್.ಎನ್. ಕುಲಕರ್ಣಿ, ಡಿ.ಜಿ. ಇಜೇರಿ ಶಿವಕಾಂತ ಮಠ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.