'ಮಂಗಳಮುಖಿಯರೇ ಆತ್ಮಗೌರವ ಬೆಳೆಸಿಕೊಳ್ಳಿ'
ಕನ್ನಡಪ್ರಭ ವಾರ್ತೆ ಬಿಜಾಪುರ ಮಾ.23
ಮಂಗಳಮುಖಿಯರು ಎಲ್ಲರಂತೆ ಆತ್ಮಗೌರವವನ್ನು ಬೆಳೆಸಿಕೊಂಡು ಬದುಕು ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಎಸ್.ಎ. ಖಾಜಿ ಕರೆ ನೀಡಿದರು.
ನಗರದ ಮಹಿಳಾ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪಯಣ ಸಾರಥ್ಯ ಸಂಸ್ಥೆ ಮತ್ತು ಮಹಿಳಾ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಂಗಳಮುಖಿಯರ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳಮುಖಿಯರು ಮನುಷ್ಯರೇ. ಅವರಿಗೂ ಎಲ್ಲರಂತೆ ಸಹಜವಾಗಿ ಆತ್ಮಗೌರವದಿಂದ ಬದುಕುವ ಹಕ್ಕು ಇದೆ. 3 ಸಾವಿರ ಪುರುಷರಲ್ಲಿ ಒಬ್ಬರು ಹೆಣ್ಣಿನಂತೆ, 5 ಲಕ್ಷ ಮಹಿಳೆಯರಲ್ಲಿ ಒಬ್ಬರು ಗಂಡಿನಂತಹ ನಡವಳಿಕೆ, ಭಾವನೆ ಹೊಂದಿರುವವರು ಜನಿಸುತ್ತಾರೆ. ಮಂಗಳಮುಖಿಯರು ಎಲ್ಲರೊಂದಿಗೂ ಸಹಜವಾಗಿ ಬೆರೆತಾಗ ಮಾತ್ರ ತಮ್ಮಲ್ಲಿರುವ ಖಿನ್ನತೆಯಿಂದ ಹೊರ ಬರಲು ಸಾಧ್ಯ ಎಂದರು.
ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಯೋಜನಾ ನಿರ್ದೇಶಕ ವಾಸುದೇವ ತೋಳಬಂದಿ ಅವರು ಮಾತನಾಡಿ, ಲೈಂಗಿಕತೆಯು ಪ್ರಕೃತಿದತ್ತವಾದ ಸಹಜ ಕ್ರಿಯೆ. ಲೈಂಗಿಕತೆ ವಿರುದ್ಧ ಲಿಂಗಗಳಲ್ಲಿ ಏರ್ಪಡುವುದು ಪ್ರಕೃತಿ ನಿಯಮವಾದರೆ, ಸಲಿಂಗಗಳಲ್ಲಿ ಏರ್ಪಡುವುದು ಸೃಷ್ಟಿ ವೈಚಿತ್ರ್ಯ. ಗಂಡು ದೇಹ ಹೊಂದಿ ಮನಸ್ಸು ಹೆಣ್ಣಾಗಿರುವುದು, ಹೆಣ್ಣು ದೇಹ ಹೊಂದಿ ಮನಸ್ಸು ಗಂಡಾಗಿರುವುದು ಇಂತಹ ಮಾನಸಿಕ ತೊಳಲಾಟದಲ್ಲಿ ಕೆಲವರು ಸಿಲುಕಿ ಒದ್ದಾಡುತ್ತಿರುತ್ತಾರೆ. ಅಂತವರು ಈ ಪರಿಸ್ಥಿತಿಯಿಂದ ಹೊರ ಬಂದು ತಮ್ಮ ಮನಸ್ಸು ಹೇಳಿದಂತೆ ಧೈರ್ಯವಾಗಿ ಬದುಕಬೇಕು. ಮಂಗಳಮುಖಿಯರನ್ನು ಸಮಾಜ ಎಲ್ಲರಂತೆ ಕಾಣಬೇಕು ಎಂದರು.
ಪಯಣ ಸಾರಥ್ಯ ಸಂಸ್ಥೆಯ ಕಾರ್ಯದರ್ಶಿ ಸವಿತಾ ಎಸ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ, ಬೆಂಗಳೂರಿನ ಕೆಎಚ್‌ಪಿಟಿ ಸಮುದಾಯ ಒಗ್ಗೂಡುಸುವಿಕೆಯ ಉಪ ನಿರ್ದೇಶಕ ರಾಮಚಂದ್ರ ರಾವ್ ಮುಂತಾದವರು ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.