ಮೂಡಿಗೆರೆ: ಇತ್ತೀಚೆಗೆ ಎನ್.ಆರ್.ಪುರ ತಾ. ಬಾಳೆಹೊನ್ನೂರು ಅರಣ್ಯಾಧಿಕಾರಿ ಮೇಲೆ ಮರಳು ದಂಧೆಕೋರರು ನಡೆಸಿದ ಹಲ್ಲೆಯನ್ನು ರಾಜ್ಯ ರೈತ ಸಂಘ ಖಂಡಿಸುತ್ತದೆ ಎಂದು ಸಂಘದ ತಾ. ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿಗೌಡ ಹೇಳಿದ್ದಾರೆ.
ಅವರು ಈ ಕುರಿತು ಗುರುವಾರ ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳಿಂದ ರಕ್ಷಣೆ ದೊರೆಯದಿರುವ ಹಿನ್ನೆಲೆಯಲ್ಲಿ ಕಿರಿಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದೆ. ಜಿಲ್ಲೆಯಲ್ಲಿ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಸ್ಪಷ್ಟ ಮರಳು ನೀತಿಯನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವಂತಿದೆ ಎಂದಿದ್ದಾರೆ.
ಹಣಬಲ, ತೋಳ್ಬಲ ಇರುವವರು ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟವನ್ನು ರಾಜಾರೋಷವಾಗಿ ನಡೆಸುತ್ತಿದ್ದಾರೆ. ಕಣಚೂರು ಗ್ರಾಮದ ಹೇಮಾವತಿ ನದಿಯಲ್ಲಿ ಯಂತ್ರದ ಮೂಲಕ ನದಿಯಾಳ ಬಗೆದು ಮರಳು ಕಳವು ನಡೆಯುತ್ತಿದೆ.
ನದಿ ಪಕ್ಕದಲ್ಲಿ ಸಾವಿರಾರು ಲೋಡು ಮರಳು ಅಕ್ರಮ ದಾಸ್ತಾನು ನಡೆಸಿ ಮನಸ್ಸಿಗೆ ತೋಚಿದಂತೆ ಸಾಗಿಸುತ್ತಿರುವುದು ಸಾಮಾನ್ಯ ಜನರಿಗೂ ಕಾಣಿಸುತ್ತಿದೆ. ಆದರೆ ಅಧಿಕಾರಿಗಳಿಗೆ ಇವೆಲ್ಲವೂ ಏಕೆ ಕಾಣಿಸುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಳು ದಂದೆಕೋರರ ಭಯದಿಂದ ಯಾರೂ ಠಾಣೆಯ ಮೆಟ್ಟಿಲು ಹತ್ತುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಧಿಕಾರಿಗಳ ಮೇಲಿನ ನಂಬಿಕೆ ಕಳೆದು ಹೋಗುವ ಅಪಾಯವಿದೆ. ಆದ್ದರಿಂದ ಲೂಟಿಕೋರರ ದಬ್ಬಾಳಿಕೆಯನ್ನು ಹತ್ತಿಕ್ಕುವ ಮೂಲಕ ಅಕ್ರಮಗಳನ್ನು ತಡೆಗಟ್ಟುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.