ಹುಬ್ಬಳ್ಳಿ: ಒಂದೊಂದು ರುಪಾಯಿ ಕೂಡಿಸಿ ಕಟ್ಟಿದ್ದ ಮನೆ ಉಳಿಸಿಕೊಳ್ಳುವಲ್ಲಿ ಇಲ್ಲಿಯ ಬೆಂಗೇರಿ ಗಾಂಧಿನಗರ ಕೊಳಚೆ ಪ್ರದೇಶದ ನಿವಾಸಿಗಳು ಕೊನೆಗೂ ವಿಫಲವಾಗಿದ್ದಾರೆ.
ತಲೆ ಮೇಲಿದ್ದ ಸೂರನ್ನು ತಾವೇ ನೆಲಸಮಗೊಳಿಸುವಂಥ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ. ಕಳೆದ ಎರಡ್ಮೂರು ದಿನಗಳಿಂದ ಆರ್‌ಸಿಸಿ, ಹೆಂಚು, ತಗಡಿನ ಮನೆಗಳಲ್ಲಿ ವಾಸವಿದ್ದ ಇಲ್ಲಿನ ನಿವಾಸಿಗಳು ಇಂದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಮನೆ ಕಳೆದುಕೊಳ್ಳಬಹುದೆಂಬ ಕಳೆದ ಒಂದು ವರ್ಷದಿಂದ ಕಾಡುತ್ತಿದ್ದ ಆತಂಕ ಇದೀಗ ನಿಜವಾಗಿದೆ. ಹಗಲಿರುಳು ಕೂಲಿ ಕೆಲಸ ಮಾಡಿ ಕಟ್ಟಿದ್ದ ಕನಸಿನ ಮನೆ ಕಣ್ಣೆದುರೇ ನೆಲಸಮಗೊಂಡಿದ್ದರೂ ಏನೂ ಮಾಡದಂಥ ಸ್ಥಿತಿ ಇಲ್ಲಿಯ ನಿವಾಸಿಗಳದ್ದು. ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ 54 ಮನೆಗಳು ಇದೀಗ ನೆಲಸಮಗೊಂಡಿದ್ದು, ಹಣ ನೀಡಿ ಖರೀದಿಸಿ ಕಟ್ಟಿಕೊಂಡಿದ್ದ ಮನೆ ತಮ್ಮದೆಂದು ತಿಳಿದಿದ್ದು ತಪ್ಪೆಂಬುದನ್ನು ನ್ಯಾಯಾಲಯದ ಮೂಲಕ ಅರಿತಿದ್ದಾರೆ. ಮನೆ ಉಳಿಸಿಕೊಳ್ಳಲು ನಡೆಸಿದ್ದ ಹೋರಾಟ ಕೈಗೊಡದೇ ಪಕ್ಕದ ಖಾಲಿ ಜಾಗೆಯಲ್ಲಿ ಇಲ್ಲಿಯ 300ಕ್ಕೂ ಹೆಚ್ಚು ಜನರು ಗುಡಿಸಲು ಹಾಕಿಕೊಂಡಿದ್ದಾರೆ.
ಬೆಂಗೇರಿಯ ಸರ್ವೇ ನಂ. 147ರ (ಸಿಟಿ ಸರ್ವೆ ನಂ. 949) ಸಬನೀಸ್ ಎಂಬವರ ಜಾಗವನ್ನು ಧಾರವಾಡದ ಸುಭಾಷ ಶೇಟ್ ಎಂಬವರು ಖರೀದಿಸಿದ್ದಾರೆಂದು ಹೇಳಿಕೊಂಡು ಆ ಜಾಗ ಮಾರಾಟ ಮಾಡಿದ್ದವರು ನಾಪತ್ತೆಯಾಗಿದ್ದಾರೆ. ಜಾಗದ ಮೂಲ ಮಾಲೀಕರಾಗಿದ್ದ ಸಬನೀಸ್ ಎಂಬವರಿಂದ ಜಾಗೆ ಖರೀದಿಸಿದ್ದ ಧಾರವಾಡದ ಮೋಹನ ಮಂಕಿಣಿ ಎಂಬವರು ಇಲ್ಲಿಯ ಮನೆ ಅಕ್ರಮವೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಇಲ್ಲಿಯ ಮನೆ ತೆರವುಗೊಳಿಸಲು ಆದೇಶ ನೀಡಿದೆ.
ಜೆಸಿಬಿ ಯಂತ್ರಗಳು ಬಂದು ಮನೆ ಕೆಡವಿದಲ್ಲಿ ಮನೆಯಲ್ಲಿದ್ದ ಸಾಮಗ್ರಿಗಳು ಹಾಳಾಗಬಹುದೆಂದು ನಿವಾಸಿಗಳು ತಾವೇ ಸ್ವತಃ ಮನೆಗಳನ್ನು ಕೆಡವಿದ್ದಾರೆ. ಮನೆಯಲ್ಲಿದ್ದ ಸಾಮಗ್ರಿ, ಇಟ್ಟಿಗೆ ಮತ್ತಿತರ ವಸ್ತುಗಳನ್ನು ತಮ್ಮ ಗುಡಿಸಲಿನ ಪಕ್ಕದಲ್ಲಿ ಜೋಡಿಸಿಟ್ಟುಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದಲೇ ತಮ್ಮ ಮನೆಗಳು ನೆಲಸಮಗೊಳ್ಳಬಹುದೆಂಬ ಭೀತಿ ಇಲ್ಲಿಯ ನಿವಾಸಿಗಳನ್ನು ಕಾಡುತ್ತಿತ್ತು. ಮನೆ ಉಳಿಸಿಕೊಳ್ಳಲು ಪ್ರತಿಭಟನೆ, ಮನವಿ ಮತ್ತಿತರ ಹೆಜ್ಜೆಗಳನ್ನೂ ಇಲ್ಲಿಯ ನಿವಾಸಿಗಳು ತುಳಿದರು. ಕೊನೆಗೆ ನ್ಯಾಯಾಲಯದ ಮೆಟ್ಟಿಲೂ ಏರಿದರು. ಆದರೆ ಮನೆ ತೆರವುಗೊಳಿಸುವಂತೆ ನ್ಯಾಯಾಲಯದ ತೀರ್ಪು ಬಂದಿತು.
ಜಾಗ ಮಾರಾಟದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಪಾಲಿಕೆ ಸದಸ್ಯ ಹೂವಪ್ಪ ದಾಯಗೋಡಿಯೂ ತಮ್ಮ ಅಳಲು ಕೇಳಲು ಬಂದಿಲ್ಲವೆಂಬ ಅಸಮಾಧಾನ ಇಲ್ಲಿಯ ನಿವಾಸಿಗಳದ್ದು. ಆದರೆ ಮಂಗಳವಾರ ಸ್ಥಳಕ್ಕೆ ಆಗಮಿಸಿದ ದಾಯಗೋಡಿ, ಮನೆ ಉಳಿಸಿಕೊಡುವ ಭರವಸೆ ನೀಡಿದರು. ಆದರೆ ಯಾವುದೇ ಜನಪ್ರತಿನಿಧಿಗಳ ಮೇಲೆ ಭರವಸೆ ಇಡಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿರುವ ಇಲ್ಲಿಯ ನಿವಾಸಿಗಳು ಮುಂದೇನು ಮಾಡಬೇಕೆಂಬುದನ್ನು ತಿಳಿಯದೇ ದಿಕ್ಕುತೋಚದಂತಾಗಿದ್ದಾರೆ.
ಕೂಲಿ, ಹಮಾಲಿ ಮಾಡಿ ಬದುಕುವ ಇಲ್ಲಿಯ ಬಹುತೇಕ ಜನರಿಗೆ ತಮ್ಮ ಭವಿಷ್ಯಕ್ಕೆ ಕತ್ತಲು ಆವರಿಸಿದಂತಾಗಿದೆ.