ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ: 14 ಸಾವಿರ ವಿದ್ಯಾರ್ಥಿಗಳು ಹಾಜರು

Vishwanath S
Updated On : 2 Apr 2013, 10:49 am

ಗದಗ:  ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾದ್ಯಂತ ಸೋಮವಾರ ಸುಗಮವಾಗಿ ನಡೆದಿದೆ. ಸೋಮವಾರ ಕನ್ನಡ ಭಾಷೆಯ ಪರೀಕ್ಷೆಯಲ್ಲಿ ಜಿಲ್ಲೆಯ 53 ಪರೀಕ್ಷಾ ಕೇಂದ್ರಗಳಲ್ಲಿ 14229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 468 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷಾ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಿ ನಕಲು, ಅವ್ಯವಹಾರ ನಡೆಯದಂತೆ ಮುನ್ನಚ್ಚೆರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು. ಪರೀಕ್ಷೆಗಳು ಸುಗಮವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ಹಾಗೂ ಅವ್ಯವಹಾರಗಳು ನಡೆದಿಲ್ಲ ಎಂದು ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಕ್ಷ್ಮೇಶ್ವರ
ಲಕ್ಷ್ಮೇಶ್ವರ: 
ಪಟ್ಟಣದ 3 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸೋಮವಾರ ಬೆಳಗ್ಗೆ ಪ್ರಾರಂಭವಾದವು. ಪ್ರಥಮ ಭಾಷಾ ವಿಷಯದ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳು ಉತ್ತರಿಸಿದರು. ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಪ್ರೌಢಶಾಲೆಯ ಕೇಂದ್ರದಲ್ಲಿ ಒಟ್ಟು 216 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 9 ಮಂದಿ ಗೈರಾಗಿದ್ದರು. ಪುರಸಭೆಯ ಉಮಾ ವಿದ್ಯಾಲಯದ ಪ್ರೌಢಶಾಲೆಯಲ್ಲಿ 242 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7 ವಿದ್ಯಾರ್ಥಿಗಳು ಗೈರಾಗಿದ್ದರು. ಚಂದನ ಶಾಲೆಯಲ್ಲಿ ಮೂವರು ಗೈರಾಗಿ, 217 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸಮೀಪದ ಶಿಗ್ಲಿ ಮತ್ತು ಪು. ಬಡ್ನಿ ಗ್ರಾಮಗಳಲ್ಲೂ ಪರೀಕ್ಷೆ ಶಾಂತ ರೀತಿಯಿಂದ ನಡೆಯಿತು ಎಂದು ಬಿಇಓ ಆರ್.ಎಸ್. ಬುರಡಿ ತಿಳಿಸಿದ್ದಾರೆ. ಪಟ್ಟಣದ ಬಿ.ಡಿ. ತಟ್ಟಿ ಮೆಮೋರಿಯಲ್ ಶಾಲೆಯ 20ಕ್ಕೂ ಹೆಚ್ಚು ಕಿವುಡ ಮತ್ತು ಮೂಗ ಮಕ್ಕಳು ಪರೀಕ್ಷೆ ಬರೆದಿದ್ದು ವಿಶೇಷವಾಗಿತ್ತು.

ರೋಣ
ರೋಣ:
ತಾಲೂಕಿನ 11 ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಿದ್ದು, ಶಾಂತಿಯುತವಾಗಿ ನಡೆದಿವೆ. ಒಟ್ಟು 3438 ವಿದ್ಯಾರ್ಥಿಗಳ ಪೈಕಿ 3319 ಮಂದಿ ಪರೀಕ್ಷೆ ಬರೆದರು. 119 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಬಿಇಓ ಕೆ.ವಿ. ಪಾಟೀಲ್ ಹೇಳಿದರು.
ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ರೋಣ 3, ನರೇಗಲ್ 2, ಗಜೇಂದ್ರಗಡ 2, ಮುಶಿಗೇರಿ 1, ಬೆಳವಣಕಿ 1, ಹೊಳೆಆಲೂರು 1 ಮತ್ತು ಸೂಡಿಯ 1 ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ರೋಣ ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ 293 ವಿದ್ಯಾರ್ಥಿಗಳು ಹಾಜರಾಗಿದ್ದರು. ಮೂವರು ಗೈರಾಗಿದ್ದರು. ವಿ.ಎಫ್. ಪಾಟೀಲ್ ಪ್ರೌಢಶಾಲೆಯಲ್ಲಿ 270 ವಿದ್ಯಾರ್ಥಿಗಳು ಹಾಜರಾಗಿದ್ದು, ಐವರು ಗೈರಾಗಿದ್ದರು. ಎಸ್.ಆರ್. ಪಾಟೀಲ್ ಸರ್ಕಾರಿ ಮಾದರಿ ಕೇಂದ್ರ ಶಾಲೆ ಕೇಂದ್ರದಲ್ಲಿ 282 ಹಾಜರಾಗಿದ್ದು, 13 ವಿದ್ಯಾರ್ಥಿಗಳು ಗೈರಾಗಿದ್ದರು. ಪಟ್ಟಣದ ಪರೀಕ್ಷಾ ಕೇಂದ್ರಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ, ಡಯಟ್ ಉಪನ್ಯಾಸಕ ಮಲ್ಲಾಡದ, ಜಿಲ್ಲಾ ಜಾಗೃತ ದಳದ ಮುಖ್ಯಸ್ಥ ಎಸ್.ವೈ. ಅಂತರಗಟ್ಟಿ ಭೇಟಿ ನೀಡಿ ಪರೀಶಿಲಿಸಿದರು.
ನಕಲಿಗೆ ಆಸ್ಪದ ನೀಡದಂತೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದು ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ್ ತಿಳಿಸಿದರು. ಪಟ್ಟಣದ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಾಗಿ ಎಸ್.ಎಂ. ಮುದೋಳ, ಎ.ಬಿ. ಹೊನ್ನವಾಡ. ಸ್ಥಾನಿಕ ಜಾಗೃತ ದಳ ಸಿಬ್ಬಂದಿಯಾಗಿ ಎಸ್.ಎಸ್. ಹಡಗಲಿ, ವಿ.ಕೆ. ಪಾಟೀಲ, ಬಿ.ಆರ್. ಗದಗಿನ, ಎಸ್.ಎನ್. ಅಬ್ಬಿಗೇರಿ, ಮೇಲ್ವಿಚಾರಕರಾಗಿ ಎಂ.ಪಿ. ಗೌಡರ ಕಾರ್ಯ ನಿರ್ವಹಿಸಿದರು.

ಹೊಳೆಆಲೂರು
ಹೊಳೆಆಲೂರ:
ಸೋಮವಾರದಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ಸ್ಥಳೀಯ ಕಲ್ಮೇಶ್ವರ ಸಂಸ್ಥೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಕನ್ನಡ ಪರೀಕ್ಷೆ ಬರೆದರು.
ಈ ಪರೀಕ್ಷಾ ಕೇಂದ್ರದಲ್ಲಿ 12 ಪ್ರೌಢ ಶಾಲೆಗಳ 461 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡರು. ಇದರಲ್ಲಿ 244 ವಿದ್ಯಾರ್ಥಿಗಳು, 217 ವಿದ್ಯಾರ್ಥಿನಿಯರಿದ್ದರು.
ಎ.ಎಂ. ಮೇಟಿ ಮತ್ತು ಪಿ.ಬಿ. ಪಾಟೀಲರು ಸ್ಥಾನಿಕ ಜಾಗೃತ ದಳದವರಾಗಿ ಆಗಮಿಸಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಜಾಗೃತೆ ವಹಿಸಿ ಕಾರ್ಯನಿರ್ವಹಿಸಿದರು. ಬೆಳಗ್ಗೆ 9.30ರಿಂದ 12ಟ 45ರ ವರೆಗೆ ಪರೀಕ್ಷೆ ನಡೆಯಿತು.
ಈ ಸಂದರ್ಭ ಪರೀಕ್ಷಾ ಅಧಿಕ್ಷಕ ವೆಂಕಟೇಶ ಗಾಣಿಗೇರ ಮಾತನಾಡಿ, ಸೋಮವಾರದಿಂದ ಏಪ್ರೀಲ್ 10ರ ವೆರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗಲಿದ್ದು, ಈ ಸಂದರ್ಭ ಯಾವುದೇ ರೀತಿಯ ಅವ್ಯವಹಾರ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ನೀಡುವ ಸಾರ್ವಜನಿಕರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದರು.

ನರಗುಂದ
ನರಗುಂದ:
ರಾಜ್ಯಾದ್ಯಂತ ಸೋಮವಾರದಿಂದ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಒಟ್ಟು 6 ಕೇಂದ್ರಗಳಲ್ಲಿ 1356 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪಟ್ಟಣದಲ್ಲಿ 4 ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ, ಗ್ರಾಮೀಣ ಪ್ರದೇಶಗಳಾದ ಕೊಣ್ಣೂರ ಮತ್ತು ಶಿರೋಳ ಕೇಂದ್ರದಲ್ಲಿ ಒಂದೊಂದರಂತೆ ಒಟ್ಟು 6 ಕೇಂದ್ರಗಳಲ್ಲಿ ಶಾಂತಯುತವಾಗಿ ಪರೀಕ್ಷೆ ನಡೆಯಿತು.
ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆ ನಂ. 1ರಲ್ಲಿ 248 ವಿದ್ಯಾರ್ಥಿಗಳಲ್ಲಿ 147 ಗಂಡು ಹಾಗೂ 103 ಹೆಣ್ಣುಮಕ್ಕಳು ಸೇರಿದಂತೆ 5 ವಿದ್ಯಾರ್ಥಿಗಳು ಗೈರಾಗಿದ್ದರು. ನವೋದಯ ಶಾಲೆಯಲ್ಲಿ ಒಟ್ಟು 268 ವಿದ್ಯಾರ್ಥಿಗಳಲ್ಲಿ 8 ಗೈರು, ಬಾಲಕರ ಪದವಿ ಕಾಲೇಜಿನಲ್ಲಿ ಒಟ್ಟು 298 ವಿದ್ಯಾರ್ಥಿಗಳಲ್ಲಿ, 149 ವಿದ್ಯಾರ್ಥಿನಿಯರು, 149 ವಿದ್ಯಾರ್ಥಿಗಳು ಸೇರಿದಂತೆ 7 ವಿದ್ಯಾರ್ಥಿಗಳು ಗೈರಾಗಿದ್ದರು.
ಶಿರೋಳದ ಗುರುಬಸವ ಪ್ರೌಢಶಾಲೆಯಲ್ಲಿ ಒಟ್ಟು 235ರಲ್ಲಿ 143 ವಿದ್ಯಾರ್ಥಿಗಳು, 92 ವಿದ್ಯಾರ್ಥಿನಿಯರು ಸೇರಿದಂತೆ ಮೂವರು ವಿದ್ಯಾರ್ಥಿಗಳು ಗೈರು. ಕೊಣ್ಣೂರಿನ ಕೆಇಎಸ್ ಪ್ರೌಢ ಶಾಲೆಯಲ್ಲಿ ಒಟ್ಟು 207ರಲ್ಲಿ 11 ಗೈರು, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಟ್ಟು 259ರಲ್ಲಿ 132 ವಿದ್ಯಾರ್ಥಿನಿಯರು, 127 ವಿದ್ಯಾರ್ಥಿಗಳು ಭಾಗವಹಿಸಿದ್ದು,, ಐವರು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಾರೆ ತಾಲೂಕಿನಾದ್ಯಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮಾತೃಭಾಷೆಯಾದ ಕನ್ನಡ ಪರೀಕ್ಷೆ ಬರೆದರು.

ಗಜೇಂದ್ರಗಡ
ಗಜೇಂದ್ರಗಡ
: ವಿದ್ಯಾರ್ಥಿ ಜೀವನದ ಮಹತ್ವದ ಮೈಲುಗಲ್ಲಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಏ. 1ರಿಂದ ರಾಜ್ಯಾದ್ಯಂತ ಆರಂಭಗೊಂಡ ಹಿನ್ನಲೆಯಲ್ಲಿ ಸೋಮವಾರ ಸ್ಥಳೀಯ ಎಸ್.ಎಮ್. ಭೂಮರಡ್ಡಿ ಪ್ರೌಢಶಾಲೆಯಲ್ಲಿ 410 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 412 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆಯಲ್ಲಿ ನಕಲು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಜತೆಗೆ ಪರೀಕ್ಷಾ ಕೇಂದ್ರದಲ್ಲಿ ಸ್ಥಳೀಯ ಕನಕದಾಸ ಪ್ರೌಢಶಾಲೆ, ಸರ್ಕಾರಿ ಉರ್ದು, ವಿ.ಟಿ. ರಾಯಬಾಗಿ, ಸರ್ಕಾರಿ ಬಾಲಕಿಯರ, ತೋಂಟದಾರ್ಯ ವಿದ್ಯಾಪೀಠ ಪ್ರೌಢಶಾಲೆ ಇನ್ನಿತರ ಸುತ್ತಲಿನ ರಾಜೂರು, ದಿಂಡೂರ, ರಾಂಪುರ, ಕುಂಟೋಜಿ, ಗೋಗೇರಿ, ಕಾಲಕಾಲೇಶ್ವರ ಗ್ರಾಮಗಳ ವಿದ್ಯಾರ್ಥಿಗಳು ಕೇಂದ್ರದಲ್ಲಿ ಪರೀಕ್ಷೆ ಬರೆದರು ಎಂದು ಪರೀಕ್ಷಾ ನಿರ್ವಹಣಾ ಮೇಲ್ವೀಚಾರಕ ಆರ್.ಕೆ. ಮಾಳೋದೆ ಹೇಳಿದರು. ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಸ್ಥಳೀಯ ಪೊಲೀಸ್ ಠಾಣೆ ಪಿಎಸ್.ಐ ವಿರಾರೆಡ್ಡಿ ಅವರು ಸೂಕ್ತ ಭದ್ರತೆ ಒದಗಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement