20 ವರ್ಷ ಬಿಜೆಪಿ ಅಧಿಕಾರಕ್ಕೆ ಬಾರದು
ಕನ್ನಡಪ್ರಭ ವಾರ್ತೆ, ಗದಗ, ಏ. 4
ಕಳೆದ 5 ವರ್ಷಗಳಲ್ಲಿ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ನಡೆಸಿದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಹಾಗಾಗಿ ಮುಂಬರುವ 20 ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುವುದಿಲ್ಲ ಎಂದು ಕೆಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ ಕುರಡಗಿ ಹೇಳಿದರು.
ಅವರು ಗುರುವಾರ ಸ್ಥಳೀಯ ವೀರೇಶ್ವರ ಲೈಬ್ರರಿ ಬಳಿ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಮೋಸವನ್ನು ತಿಳಿದ ಮಾಜಿ ಸಿಎಂ ಬಿಎಸ್ವೈ ಡಿ. 9ರಂದು ಕೆಜೆಪಿ ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಹೊಸ ರಾಜಕೀಯ ತಿರುವು ನೀಡಿದರು. ಕೇವಲ 3 ತಿಂಗಳುಗಳ ಹಿಂದೆ ಉದಯಿಸಿದ ಕೆಜೆಪಿ ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹಲವು ಅಭ್ಯರ್ಥಿಗಳನ್ನು ಗೆಲ್ಲಿಸಿದೆ. ಈಚೆಗೆ ಗದಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಉದ್ಯಮಿ ಎಸ್.ಬಿ. ಸಂಕಣ್ಣವರ ಹೆಸರು ಸೂಚಿಸಿದೆ ಎಂದರು. ಸಿ ಫೋರ್ ಸಮಿತಿಯ ತೀರ್ಪು ಸ್ವಾಗತಾರ್ಹ ಈಚೆಗೆ ಸುವರ್ಣ ವಾಹಿನಿ ಹಾಗೂ ಸಿ ಫೋರ್ ಸಮಿತಿಯು ಕೈಗೊಂಡ ಸಮಿತಿಯ ಕೈಗೊಂಡ ಸಮೀಕ್ಷೆ ಸ್ವಾಗತಾರ್ಹವಾಗಿದೆ. ಇದರಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಆಡಳಿತಾವಧಿಯನ್ನು ಶೇ. 50ರಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಆಡಳಿತಾವಧಿಯಲ್ಲಿ ರಾಜ್ಯವು 2ನೇ ಸ್ಥಾನವನ್ನು ಪಡೆದಿತ್ತು. ನಂತರ ಸಿಎಂ ಸ್ಥಾನ ವಹಿಸಿಕೊಂಡಿದ್ದ ಸದಾನಂದಗೌಡರ ಅಧಿಕಾರಾವಧಿಯಲ್ಲಿ ರಾಜ್ಯವು 12ನೇ ಸ್ಥಾನಕ್ಕಿಳಿಯಿತು. ರಾಜ್ಯ ಬಿಜೆಪಿಯು ಜನವಿರೋಧಿ ಆಡಳಿತ ನಡೆಸಿದೆ ಎಂದರು.
ಎಸ್.ಬಿ. ಸಂಕಣ್ಣವರ ಮಾತನಾಡಿ, 1992ರಿಂದ ಇಲ್ಲಿಯವರೆಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಅನುಯಾಯಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಳೆದ 2008 ರ ಚುನಾವಣೆಯಲ್ಲಿ ಬಿಜೆಪಿಯಲ್ಲಿನ ಕೆಲ ಮುಖಂಡರ ಕುತಂತ್ರದಿಂದಾಗಿ ತಮಗೆ ಟಿಕೆಟ್ ತಪ್ಪಿತ್ತು. ಈಗ ಮತ್ತೆ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್ವೈಗೆ ಆದ ಅನ್ಯಾಯ ಹಾಗೂ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕೆಜೆಪಿ ಸಿದ್ಧಾಂತಗಳಿಗೆ ಮೆಚ್ಚಿ ಕೆಜೆಪಿಗೆ ಸೇರಿದ್ದು, ಈಗಾಗಲೇ ನಾನು ಕೈಗೊಂಡ ಕಾರ್ಯ ಮೆಚ್ಚಿ ಪಕ್ಷದ ಮುಖಂಡರು ಗದಗ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದು, ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಬಿ.ಎಸ್. ಯಡಿಯೂರಪ್ಪರ ಕೈ ಬಲಪಡಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕೆಜೆಪಿಯ ರೋಣ ತಾಲೂಕು ಅಧ್ಯಕ್ಷ ಅಶೋಕ ಬೇವಿನಕಟ್ಟಿ, ಸದು ಮದರಿಮಠ, ಮಹೇಶ ಕರಿಬಿಷ್ಟಿ, ಸಂಗು ಬಂಗಾರಶೆಟ್ಟರ, ರಜಾಕ ಮುಂತಾದವರು ಉಪಸ್ಥಿತರಿದ್ದರು.