ಗದಗ ಗದ್ದುಗೆ ಗುದ್ದಾಟ
ಕನ್ನಡಪ್ರಭ ವಾರ್ತೆ, ಗದಗ, ಏ. 4
ಗದಗ ವಿಧಾನಸಭಾ ಕ್ಷೇತ್ರವು ಜಿಲ್ಲಾ ಕೇಂದ್ರ ಸ್ಥಾನವನ್ನು ಒಳಗೊಂಡಿದ್ದು, ರಾಜ್ಯದಲ್ಲಿಯೇ ಅತ್ಯಂತ ಕುತೂಹಲ ಕೆರಳಿಸಿದೆ. ಗದಗ ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಹಾಗೂ ಲಿಂಗಾಯತ ಮತಗಳು ಸಮನಾದ ಪ್ರಮಾಣದಲ್ಲಿರುವುದರಿಂದ ಈ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದು, ಪ್ರತಿ ಬಾರಿಯ ಚುನಾವಣೆಯ ಇತಿಹಾಸ ಗಮನಿಸಿದಲ್ಲಿ ಇದು ತಿಳಿದು ಬರುವ ಸತ್ಯವಾಗಿದೆ.
ಮಾಜಿ ಸಚಿವ ಎಚ್.ಕೆ. ಪಾಟೀಲ ಕಾಂಗ್ರೆಸ್ನಿಂದ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿರುವುದರಿಂದ ಕ್ಷೇತ್ರವು ರಾಜ್ಯದ ಗಮನವನ್ನೇ ತನ್ನತ್ತ ಸೆಳೆದಿದೆ. ಬಿಜೆಪಿಯಿಂದ ಶ್ರೀಶೈಲಪ್ಪ ಬಿದರೂರಗೆ ಟಿಕೆಟ್ ಸಿಗುವ ಸಾಧ್ಯತೆ ಇದೆಯಾದರೂ ಮೂಲ ಬಿಜೆಪಿಗರೆಲ್ಲ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರಿಗೆ ಟಿಕೆಟ್ ನೀಡದಂತೆ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಯುವಕರನ್ನು ಸೆಳೆಯುವಲ್ಲಿ ಹವಣಿಸುತ್ತಿದೆ.
ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಿರಿಯ ಮುಖಂಡ ಎಸ್.ಬಿ. ಸಂಕಣ್ಣವರ ಯಡಿಯೂರಪ್ಪನವರ ಅನುಯಾಯಿಯಾಗಿದ್ದು, ಬಿಜೆಪಿಯಿಂದ ಹೊರ ಬಂದು ಕೆಜೆಪಿಯಿಂದ ಸ್ಪರ್ಧಿಸಿದ್ದು, ಬಿಜೆಪಿಯ ಗೆಲುವಿಗೆ ದೊಡ್ಡ ತೊಡಕಾಗಿ ಪರಿಣಮಿಸಲಿದೆ. ಜೆಡಿಎಸ್ ಇಂದಿಗೂ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಹೆಸರು ಅಂತಿಮಗೊಳಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೂ ಯಶಸ್ಸು ಕಂಡಿಲ್ಲ, ಹಾಗಾಗಿ ಗದಗ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ.
ಹಿನ್ನೆಲೆ: 1957ರಲ್ಲಿ ಕೆ.ಪಿ. ಗದಗ ಕಾಂಗ್ರೆಸ್ನಿಂದ ಸ್ಪರ್ಧಿಸಿ 16,922 ಮತ ಪಡೆದು ಆಯ್ಕೆಯಾಗಿದ್ದರು. 1962ರಲ್ಲಿಯೂ ಕೆ.ಪಿ. ಗದಗ 18,539 ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದರು. 1967ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ಎಚ್. ಪಾಟೀಲ 27,759 ಮತ ಪಡೆದು ಆಯ್ಕೆಯಾಗಿ, ಕಾಂಗ್ರೆಸ್ ಪ್ರಭಾವದಲ್ಲಿಯೂ ಸ್ವತಂತ್ರವಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು. ನಂತರ 1972ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಕೆ.ಎಚ್. ಪಾಟೀಲ 29,638 ಮತಗಳನ್ನು ಪಡೆದು ಆಯ್ಕೆಯಾದರು.
1978ರಲ್ಲಿ ಜನತಾ ಪರಿವಾರದಿಂದ ಸ್ಪರ್ಧಿಸಿದ್ದ ಸಿ.ಎಸ್. ಮುತ್ತಿನಪೆಂಡಿಮಠ 28,094 ಮತಗಳನ್ನು ಪಡೆದು ಕೆ.ಎಚ್. ಪಾಟೀಲರನ್ನು ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ಪಡೆದಿದ್ದರು. 1983 ರಲ್ಲಿ ಸಿ.ಎಸ್. ಮುತ್ತಿನಪೆಂಡಿಮಠ ಕಾಂಗ್ರೆಸ್ ಸೇರ್ಪಡೆಯಾಗಿ 25,104 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದರು. 1985ರಲ್ಲಿ ಕೆ.ಎಚ್. ಪಾಟೀಲರು ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿ 39,226 ಮತಗಳನ್ನು ಪಡೆದು ಆಯ್ಕೆಯಾದರು. 1989ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ ಕೆ.ಎಚ್. ಪಾಟೀಲ 44,155 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಪಾಟೀಲ್ಗೆ ಹ್ಯಾಟ್ರಿಕ್ ಗೆಲುವು: ಜೂನ್ 8, 1992ರಲ್ಲಿ ಕೆ.ಎಚ್. ಪಾಟೀಲರ ನಿಧನದಿಂದಾಗಿ 1992ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಡಿ.ಆರ್. ಪಾಟೀಲ 43,878 ಮತಗಳನ್ನು ಪಡೆದು ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶಿಸಿದರು. 1994ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಆರ್. ಪಾಟೀಲ 44,388 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಡಿ.ಆರ್. ಪಾಟೀಲ 53,425 ಮತ ಪಡೆದು ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರು. 2004ರ ಚುನಾವಣೆಯಲ್ಲಿಯೂ 50,580 ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಗದಗ ಕ್ಷೇತ್ರದಲ್ಲಿ ದಾಖಲೆ ಸ್ಥಾಪಿಸಿದರು. ಆದರೆ, 2008ರ ಚುನಾವಣೆಯಲ್ಲಿ ತಮ್ಮ ಸಹೋದರ ಎಚ್.ಕೆ. ಪಾಟೀಲಗಾಗಿ ಕಣದಿಂದ ಹಿಂದೆ ಸರಿದರು. ಬಿಜೆಪಿಯ ಪರವಾಗಿ ಬೀಸಿದ ಅಲೆಯಲ್ಲಿ ಎಚ್.ಕೆ. ಪಾಟೀಲ್ ಸೋಲುಂಡು, ರೋಣ ಕ್ಷೇತ್ರದವರಾದ ಶ್ರೀಶೈಲಪ್ಪ ಬಿದರೂರ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದರು.
ಮತದಾರರು: ಗದಗ, ಮುಳಗುಂದ, ಹುಲಕೋಟಿ ಹೋಬಳಿ, ಗದಗ-ಬೆಟಗೇರಿ ನಗರಸಭೆ ಹಾಗೂ ಮುಳಗುಂದ ಪುರಸಭೆ ವ್ಯಾಪ್ತಿಯಲ್ಲಿನ ಪ್ರದೇಶಗಳನ್ನು ಒಳಗೊಂಡಿದೆ. ಗದಗ ವಿಧಾನಸಭಾಕ್ಷೇತ್ರದಲ್ಲಿ ಒಟ್ಟು 1,80,586 ಮತದಾರರಿದ್ದು, ಅವರಲ್ಲಿ 91,968 ಪುರುಷರು ಹಾಗೂ 88,618 ಮಹಿಳಾ ಮತದಾರರಿದ್ದಾರೆ. ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ ಮತಗಳೇ ಇಲ್ಲಿ ಪ್ರತಿ ಬಾರಿಯೂ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿವೆ. ಅಲ್ಲದೆ ಮುಸ್ಲಿಂ ಮತಗಳೂ ಕ್ಷೇತ್ರದ ಫಲಿತಾಂಶವನ್ನೇ ಬದಲಿಸುವ ಮಟ್ಟಿಗೆ ಪ್ರಾಬಲ್ಯ ಹೊಂದಿವೆ.
ಜಾತಿವಾರು ಮತಗಳು: ಗದಗ ಕ್ಷೇತ್ರದಲ್ಲಿ 30,248 ಪಂಚಮಸಾಲಿ, 13,988 ಬಣಜಿಗ, 10,101 ಗಾಣಿಗ, 3,957 ಜಂಗಮ, 2,560 ಕುಡುಒಕ್ಕಲಿಗ, 3,150 ಸಾದರ ಲಿಂಗಾಯತ, 4,571 ಬ್ರಾಹ್ಮಣ, 21,150 ಕುರುಬ, 5,500 ಮರಾಠಾ, 4,958 ರೆಡ್ಡಿ ಲಿಂಗಾಯತ, 29,145 ಮುಸ್ಲಿಂ, 9,435 ಎಸ್ಸಿ (ಎಡ), 7,735 ಎಸ್ಸಿ (ಬಲ), 9,158 ಎಸ್ಟಿ, 13,157 ಪಟೇಗಾರ ಮತಗಳಿವೆ. ಇನ್ನುಳಿದ ಸಣ್ಣ ಸಮುದಾಯಗಳು ಸೇರಿ 13,235 ಮತಗಳಿದ್ದು, ಈ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
8 ಬಾರಿ ಪ್ರತಿನಿಧಿಸಿ ದಾಖಲೆ
ಗದಗ ಕ್ಷೇತ್ರವನ್ನು ಸತತ 8 ಬಾರಿ ಹುಲಕೋಟಿಯ ಪಾಟೀಲ ಮನೆತನ ಪ್ರತಿನಿಧಿಸುತ್ತಾ ಬಂದಿದೆ. ಅವರ ಜನಪರ ಧೋರಣೆ, ಜನರೊಂದಿಗಿನ ಸಂಪರ್ಕ, ಹಿಂದುಳಿದ ವರ್ಗಗಳ ಮೇಲಿನ ಕಾಳಜಿಯಿಂದಾಗಿಯೇ ಅವರು ಇಷ್ಟೊಂದು ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ಲಭ್ಯವಾಗಿದೆ. 4 ಬಾರಿ ಕೆ.ಎಚ್. ಪಾಟೀಲ ಪ್ರತಿನಿಧಿಸಿದ್ದರೆ, 4 ಬಾರಿ ಡಿ.ಆರ್. ಪಾಟೀಲರು ಗದಗ ಕ್ಷೇತ್ರವನ್ನು ಪ್ರತಿನಿಧಿಸಿದ್ದು ದಾಖಲೆಯಾಗಿದೆ.
-ಶಿವಕುಮಾರ ಕುಷ್ಟಗಿ