ಪರ್ಯಾಯ ವಿದ್ಯುತ್ ಅವಶ್ಯ: ಗ್ರಾಮಪುರೋಹಿತ
ನರೇಗಲ್ಲ: ಇಂದಿನ ದಿನಗಳಲ್ಲಿ ವಿದ್ಯುತ್ ಅವಶ್ಯಕತೆ ಹೆಚ್ಚಿದ್ದು, ಅದನ್ನು ಉತ್ಪಾದಿಸಲು ಬೇಕಾದ ಇಂಧನಗಳ ಕೊರತೆ ಉಂಟಾಗಿದ್ದು, ಅನಿವಾರ್ಯವಾಗಿ ಪರ್ಯಾಯ ಇಂಧನದ ಅವಶ್ಯಕತೆ ಇದೆ ಎಂದು ಸ್ಥಳೀಯ ವೈದ್ಯ ಡಾ. ನಾಗರಾಜ ಗ್ರಾಮಪುರೋಹಿತ ಹೇಳಿದರು.
ಈಚೆಗೆ ಅವರು ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗ್ರೀನ್ ಟ್ರಾನಿಕ್ಸ್ ಡಿಸೈನ್ ಲ್ಯಾಬ್ ಮತ್ತು ರೋಟರಿ ಘಟಕದ ವತಿಯಿಂದ ಜರುಗಿದ ಸೋಲಾರ್ ಅಳವಡಿಕೆಯ ಉದ್ಘಾಟನಾ ಕಾರ್ಯಕ್ರದಮಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಗುಜರಾತ್ನಲ್ಲಿ ಜಾರಿಗೆ ತಂದಿರುವಂತೆ ನಮ್ಮ ರಾಜ್ಯ ಸರ್ಕಾರದವರೂ ಗ್ರಾಮಗಳ ಪ್ರತಿಯೊಂದು ಮನೆಗೆ ಸೋಲಾರ್ ಅಳವಡಿಸಿಕೊಳ್ಳಲು ಸೂಚಿಸಬೇಕು. ಸಾಮಾನ್ಯ ಜನತೆಗೆ ಕೈಗೆಟುಕುವ ದರದಲ್ಲಿ ಈ ಕಂಪನಿ ಸೋಲಾರನ್ನು ತಯಾರಿಸುತ್ತಿದೆ ಇದರ ಸದುಪಯೋಗವನ್ನು ನಾವು ಪಡೆದುಕೊಳ್ಳಬೇಕಾಗಿದೆ. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಪರಿಣಾಮ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕಾಗಿ ನಾವು ಶಾಶ್ವತವಾಗಿ ವಿದ್ಯುತ್ನ್ನು ನೀಡುವಂತಹ ಶಕ್ತಿ ಮೂಲಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಗ್ರೀನ್ ಟ್ರಾನಿಕ್ಸ್ನ ನಿರ್ದೇಶಕ ಕಾಂತೇಶ ಕುಡಪಲ್ಲಿ ಮಾತನಾಡಿ, ಈ ಪಟ್ಟಣದಲ್ಲಿ ಪ್ರಥಮ ಭಾರಿಗೆ ದೇವಸ್ಥಾನದಲ್ಲಿ ಅಳವಡಿಸುವ ಮೂಲಕ ನಮ್ಮ ಸಂಸ್ಥೆಯ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಮುಟ್ಟುವಂತೆ ಮಾಡುತ್ತಿದ್ದೇವೆ. ಜನತೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವಾಗುವ ತಂತ್ರಜ್ಞಾನವನ್ನು ಅಳವಡಿಸಿ ತಯಾರಿಸಲಾಗಿದೆ. ಬಡವರಿಗೆ, ಸಾಮಾನ್ಯ ವರ್ಗದ ಜನತೆಗೆ ದೊರೆಯುವಂತಾಗಲು ಯೋಗ್ಯ ಮಾದರಿಗಳನ್ನು ಹೊರತರಲಾಗಿದೆ. ನಾವು ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರಕುವ ಶಕ್ತಿ ಮೂಲದಿಂದ ಮನೆಯ ಮೇಲ್ಛಾವಣಿಯಿಂದ ವಿದ್ಯುತ್ ಪಡೆಯಬಹುದು ಎಂದರು.
ಶಿಕ್ಷಕ ಸೋಮಣ್ಣ ಕುರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ವೆಂಕಣ್ಣ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಲವರನ್ನು ಸನ್ಮಾನಿಸಲಾಯಿತು ಉದ್ಘಾಟನೆಯನ್ನು ಶಿವಪ್ಪ ಕುಷ್ಟಗಿ ನೆರವೇರಿಸಿದರು. ಅತಿಥಿಗಳಾಗಿ ಶಿಕ್ಷಕ ಅರುಣ ಕುಲಕರ್ಣಿ ಭಾಗವಹಿಸಿದ್ದರು. ಎಸ್.ಸಿ. ಆಲೂರ, ಶೇಖಣ್ಣ ಲಕ್ಕನಗೌಡ್ರ, ಕಳಕಪ್ಪ ಹತ್ತಿಕಟಗಿ, ಶರಣಪ್ಪ ಬೂದಿಹಾಳ, ಬಸಪ್ಪ ಲಕ್ಕನಗೌಡ್ರ, ಕಳಕಪ್ಪ ಹೊನವಾಡ, ಪ್ರಕಾಶ ಹಕ್ಕಿ, ಸೋಮು ಲಕ್ಕನಗೌಡ್ರ, ನಿಂಗಪ್ಪ ಲಕ್ಕನಗೌಡ್ರ ಮುಂತಾದವರು ಉಪಸ್ಥಿತರಿದ್ದರು. ಶ್ರೀಕಾಂತ ಪಾಟೀಲ ಪ್ರಾರ್ಥಿಸಿದರು. ಶಿವನಗೌಡ ಪಾಟೀಲ ಸ್ವಾಗತಿಸಿದರು. ಚಂದ್ರು ಧರ್ಮಾಯತ ನಿರೂಪಿಸಿ, ವಂದಿಸಿದರು.