ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
ಕನ್ನಡಪ್ರಭ ವಾರ್ತೆ, ಗದಗ, ಏ. 4
ಗದಗ ವಿಧಾನಸಭಾಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಬಹುತೇಕ ಅಂತಿಮಗೊಂಡು, ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಬೇಕು ಎನ್ನುವ ಈ ಸಂದರ್ಭದಲ್ಲಿ ಗದಗ ಶಹರ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿದ್ದು, ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸಿರುವ ಆರೋಪ ಎದುರಿಸುತ್ತಿರುವ ಹಾಲಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರಿಗೆ ಬಿಜೆಪಿ ಟಿಕೆಟ್ ನೀಡಬಾರದು ಎಂದು ಕೆಲ ಬಿಜೆಪಿ ಪ್ರಮುಖರು ಪಕ್ಷದ ರಾಜ್ಯಾಧ್ಯಕ್ಷರಿಗೆ ಬುಧವಾರ ಹುಬ್ಬಳ್ಳಿಯಲ್ಲಿ ಮನವಿ ಸಲ್ಲಿಸಿದ ಘಟನೆ ಜರುಗಿದೆ.
ಭಿನ್ನಮತಕ್ಕೆ ಕಾರಣ: ಶ್ರೀಶೈಲಪ್ಪ ಬಿದರೂರ ಮೊದಲು (ಜನವರಿ 9ರ ಕೆಜೆಪಿ ಸಭೆ) ಕೆಜೆಪಿಯಲ್ಲಿ ಬಹಿರಂಗವಾಗಿಯೇ ಗುರುತಿಸಿಕೊಂಡು, ನಂತರ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಘೋಷಿಸಿದರು. ಇದು ಸಹಜವಾಗಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಬೇಸರಕ್ಕೆ ಕಾರಣವಾಯಿತು. ಇವರು ಕೆಜೆಪಿಗೆ ಹೋದಲ್ಲಿ ನಮಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ನಂಬಿದ್ದ ಕೆಲವರು ಸಾಕಷ್ಟು ಅಸಮಾಧಾನಗೊಂಡಿದ್ದು, ಅವರೆಲ್ಲ ಈಗ ಬಿದರೂರ ಬಿಜೆಪಿಯ ನೈಜ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಮತ್ತು ಕೆಜೆಪಿ-ಬಿಜೆಪಿ ಗೊಂದಲದಲ್ಲಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ಮನವಿ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ವರಿಷ್ಠರ ಮುಂದೆ ಹೇಳಿಕೊಂಡಿದ್ದಾರೆ.
ಗೊಂದಲ: ಬಿದರೂರ ಮೊದಲು ಕೆಜೆಪಿಗೆ ಹೋಗುವುದಾಗಿ ಹೇಳಿದ್ದರಿಂದ ಕಳೆದ ಬಾರಿ ಬಿಜೆಪಿ ಟಿಕೆಟ್ ವಂಚಿತ ಎಸ್.ಬಿ. ಸಂಕಣ್ಣವರ ಬಿಜೆಪಿಯಲ್ಲಿಯೇ ಉಳಿದು, ಗದಗ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಹೊಂದಿದ್ದರು. ಆದರೆ, ಬಿದರೂರ ಬಿಜೆಪಿಯಲ್ಲಿಯೇ ಉಳಿದಿದ್ದರಿಂದ ಸಂಕಣ್ಣವರ ಅನಿವಾರ್ಯವಾಗಿ ಕೆಜೆಪಿಗೆ ಹೋಗಿ, ಈಗ ಆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಇತ್ತ ಬಿಜೆಪಿಯಲ್ಲಿನ ಕೆಲವರು ಪಕ್ಷ ವಿರೋಧಿ ವರ್ತನೆಯ ಆಧಾರದ ಮೇಲೆ ಬಿದರೂರಗೆ ಟಿಕೆಟ್ ನೀಡಬಾರದು ಎಂದು ಹೇಳುತ್ತಿದ್ದು, ಸಹಜವಾಗಿ ಇದು ಬಿದರೂರಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಅವರು ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.
ಆಸ್ತಿ ವಿವರ ಸಲ್ಲಿಸಿಲ್ಲ: ಬಿದರೂರ ಅವರು ಲೋಕಾಯುಕ್ತರಿಗೆ ಆಸ್ತಿ ವಿವರ ನೀಡಲ್ಲವಂತೆ, ಹಾಗೂ ಈ ಎಲ್ಲ ಬೆಳವಣಿಗೆಗಳು ಅವರನ್ನು ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿವೆ. ರಾಜ್ಯದ 12 ಶಾಸಕರು 2010-11ನೇ ಸಾಲಿನ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತರಿಗೆ ನೀಡಿಲ್ಲ ಎಂದು ಲೋಕಾಯುಕ್ತ ಭಾಸ್ಕರ್ರಾವ್ ರಾಜ್ಯಪಾಲ ಭಾರದ್ವಾಜ ಹಾಗೂ ಸ್ಪೀಕರ್ ಬೋಪಯ್ಯ ಅವರಿಗೆ ಈಚೆಗೆ ಪತ್ರ ಬರೆದಿದ್ದು, ಅದರಲ್ಲಿ ಶ್ರೀಶೈಲಪ್ಪ ಬಿದರೂರ ಅವರ ಹೆಸರಿದೆ. ಆಸ್ತಿ ವಿವರ ಸಲ್ಲಿಸಲು ಗಡುವು ಮುಗಿದು 8 ತಿಂಗಳು ಗತಿಸಿದರೂ ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಸದೇ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
-ವಿಶೇಷ ವರದಿ