ಡಿಡಿಪಿಐ ಭೇಟಿ: ನೋಂದಣಿ ರದ್ದಿಗೆ ಶಿಫಾರಸು
ಗದಗ: ನಗರದ ಹುಡ್ಕೋ ಭಾಗದಲ್ಲಿರುವ ಜೆಸಿ ಶಾಲೆಯ ಆಡಳಿತ ಮಂಡಳಿ ಹೆಚ್ಚಿನ ಫೀ ಸಂಗ್ರಹಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಡಿಡಿಪಿಐ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ, ಪರವಾನಿಗೆ ರದ್ದತಿಗೆ ಶಿಫಾರಸು ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹೆಚ್ಚಿನ ಶುಲ್ಕ ಹಾಗೂ ಡೊನೇಶನ್ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಬೆಳಗ್ಗೆಯಿಂದ ಪಾಲಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಡಿಡಿಪಿಐ ರಾಜೀವ ನಾಯಕ ಆಡಳಿತ ಮಂಡಳಿ ಹಾಗೂ ಪಾಲಕರೊಂದಿಗೆ ರಾತ್ರಿಯವರೆಗೂ ಸುದೀರ್ಘ ಚರ್ಚೆ ನಡೆಸಿದರು. ಆಡಳಿತ ಮಂಡಳಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮತ್ತು ಪಾಲಕರ ಲಿಖಿತ ದೂರಿನ ಆಧಾರದಲ್ಲಿ ತನಿಖೆ ನಡೆಸಿ, ವಂತಿಗೆ ಸಂಗ್ರಹ ಖಚಿತವಾಗಿರುವ ಕಾರಣ ಶಾಲೆಗೆ ನೀಡಿದ್ದ ನೋಂದಣಿಯನ್ನು 1997ರ ಶಿಕ್ಷಣ ಕಾಯ್ದೆ ನಿಯಮ 34 ಹಾಗೂ 39ರ ಅಡಿಯಲ್ಲಿ ರದ್ದುಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬೆಳಗ್ಗೆಯಿಂದ ಡೊನೇಶನ್ ವಿಷಯವಾಗಿ ತಮ್ಮ ಪಟ್ಟನ್ನು ಸಡಿಲಿಸದ ಆಡಳಿತ ಮಂಡಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರಮ ದೊಡ್ಡ ಆಘಾತ ನೀಡಿದ್ದು, ಹೆಚ್ಚಿನ ಡೊನೇಶನ್ ಸಂಗ್ರಹಿಸುವ ಶಾಲೆಗಳ ಆಡಳಿತ ಮಂಡಳಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಗದಗ ಶಹರ ಬಿಇಓ ಐ.ಬಿ. ಬೆನಕೊಪ್ಪ, ನೂರಾರು ಪಾಲಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.