ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೀಕ್ಷೆ: ಶೀತಲ್‌ಗೆ ನಾಳೆ ಅಭಿನಂದನೆ

Vishwanath S
Updated On : 6 Apr 2013, 11:44 am

ಗಜೇಂದ್ರಗಡ: ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸುಖ- ಸಂತೋಷದ ಬದುಕನ್ನು ತ್ಯಜಿಸಿ ಕಠೋರ ವ್ರತಾಚರಣೆಯ ಸನ್ಯಾಸ ದೀಕ್ಷೆ ಪಡೆಯಲು ಮುಂದಾಗಿರುವ ಸುರಪುರ ಪಟ್ಟಣದ ಶೀತಲ ಆಂಚಲಿಯಾ ಅವರಿಗೆ ಸ್ಥಳೀಯ ಜೈನ ಸಮಾಜ ಹಾಗೂ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವತಿಯಿಂದ ಅಭಿನಂದನಾ ಸಮಾರಂಭವನ್ನು ಏ. 7ರಂದು ಇಲ್ಲಿನ ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಜೈನ ಮಂದಿರದಿಂದ ತೆರೆದ ವಾಹನದಲ್ಲಿ ದೀಕ್ಷೆ ಸ್ವೀಕರಿಸುವ ಯುವತಿ ಭವ್ಯ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಅಶೋಕ ಬಾಗಮಾರ ನಿವಾಸ ಮಾರ್ಗವಾಗಿ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆಯಲ್ಲಿ ಸಂಚರಿಸಲಿದೆ.  ಜೈನ ದೀಕ್ಷೆಯಲ್ಲಿ ಆಭರಣ, ವೈಭವದ ವಸ್ತ್ರಗಳನ್ನು ತ್ಯಜಿಸಿ ಶ್ವೇತ ವಸ್ತ್ರ ತೊಟ್ಟು, ವರ್ಷದಲ್ಲಿ ಎರಡು ಬಾರಿ ಕೈಯಿಂದಲೇ ಕೇಶಲೋಚನ ಮಾಡಿಕೊಳ್ಳುತ್ತಾರೆ. ಬಿಸಿಲು-ಮಳೆ ಎನ್ನದೆ ಬರಿಗಾಲಲ್ಲಿ ಸಂಚರಿಸಿ, ಕಟ್ಟಿಗೆ ಪಾತ್ರೆಯಲ್ಲಿ ಆಹಾರ, ನೀರು ಸ್ವೀಕರಿಸುತ್ತಾರೆ. ಸನ್ಯಾಸ ಸ್ವೀಕರಿಸುತ್ತಿರುವ 23ರ ಹರೆಯದ ಶೀತಲ್‌ಜಿಗೆ ತಂದೆ ಕಾಂತಿಲಾಲ, ತಾಯಿ ವನಿತಾಬಾಯಿ, ಅಣ್ಣ ಅಮಿತ ಕುಮಾರ್ ಹಾಗೂ ಇಬ್ಬರು ಸೋದರಿಯರು ಇದ್ದಾರೆ. ಮದುವೆ, ಸಂಸಾರದ ಗೋಜಿಗೆ ಹೋಗದೆ ವಿಶ್ವಶಾಂತಿಗಾಗಿ ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿರುವ ಅವರನ್ನು ಸ್ಥಳೀಯ ಜೈನ ಸಮಾಜ ಭಾನುವಾರ ಅಭಿನಂದಿಸುತ್ತದೆ ಎಂದು ಅಧ್ಯಕ್ಷ ಅಶೋಕ ಬಾಗಮಾರ ತಿಳಿಸಿದರು.

ಸಕಾಲ ಅನುಷ್ಠಾನ: ಗದಗ ಜಿಲ್ಲೆಗೆ ಪ್ರಥಮ ಸ್ಥಾನ
ಗದಗ: 
ಕರ್ನಾಟಕ ನಾಗರಿಕರಿಗೆ ಸೇವಾ ಖಾತರಿ ಅಧಿನಿಯಮ-2011 ಸಕಾಲ ಯೋಜನೆಯ ಅನುಷ್ಠಾನದಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ಸಕಾಲ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಆರಂಭಿಕ ಹಂತದಲ್ಲಿ ಈ ಕಾರ್ಯಕ್ರಮದ ಅಡಿಯಲ್ಲಿ 11 ಇಲಾಖೆಗಳ 151 ಸೇವೆಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಪ್ರಸ್ತುತ 18 ಇಲಾಖೆಗಳ 26 ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಡಿ 2012ರ ಏಪ್ರಿಲ್‌ನಿಂದ 2013ರ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಸ್ವೀಕರಿಸಲಾದ 385405 ಅರ್ಜಿಗಳ ಪೈಕಿ 376162 ಅರ್ಜಿಗಳನ್ನು ವಿಲೇವಾರಿ ಮಾಡಿ ಶೇ. 97.6ರಷ್ಟು ಸಾಧನೆ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಮುಂಡರಗಿ ದ್ವಿತೀಯ ಸ್ಥಾನ, ರೋಣ 6ನೇ ಸ್ಥಾನ, ಗದಗ 21ನೇ ಸ್ಥಾನ, ಶಿರಹಟ್ಟಿ 32ನೇ ಸ್ಥಾನ ಹಾಗೂ ನರಗುಂದ 35ನೇ ಸ್ಥಾನ ಪಡೆದುಕೊಂಡಿವೆ. ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶ್ರಮಿಸಿದ ಜಿಲ್ಲೆಯ ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಅಭಿನಂದನಾರ್ಹರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪ್ರಕಟ
ಗದಗ:
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯ ಪರಿಷತ್ತು ಬೆಂಗಳೂರು, ಡಿಎಸ್‌ಆರ್‌ಟಿ ಬೆಂಗಳೂರು, ಪಪೂ ಶಿಕ್ಷಣ ಇಲಾಖೆ ಗದಗ ಸಹಯೋಗದೊಂದಿಗೆ 2012-13ನೇ ಸಾಲಿನ ಯುವ ಪ್ರಶಸ್ತಿಗಾಗಿ ಈಚೆಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಹಾಗೂ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ಅಧ್ಯಕ್ಷತೆಯಲ್ಲಿ ಜರುಗಿತು. ಜಿಲ್ಲೆಯ 9 ವಿದ್ಯಾರ್ಥಿಗಳ ಆರ್ಜಿಗಳನ್ನು ಜಿಲ್ಲಾ ಸಮಿತಿಯು ಪರಿಶೀಲಿಸಿ, ಪ್ರಥಮ ಸ್ಥಾನವನ್ನು ಸಿ.ಡಿ.ಓ. ಜೈನ್ ಆಂಗ್ಲ ಮಾಧ್ಯಮ ಶಾಲೆಯ ಭಾಗ್ಯಶ್ರೀ ಜೋಶಿ, ದ್ವಿತೀಯ ಸ್ಥಾನವನ್ನು ಗದಗನ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯ ಕಾವೇರಿ ತಳವಾರ, ತೃತೀಯ ಸ್ಥಾನವನ್ನು ಗದಗನ ಸಿದ್ಧಲಿಂಗ ನಗರದ ಸರ್ಕಾರಿ ಪಪೂ ಕಾಲೇಜಿನ ಗೀತಾ ಕೊಣ್ಣೂರ ಪಡೆದಿದ್ದಾರೆ ಎಂದರು. ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ ನಾಯಕ, ಶಿಕ್ಷಣಾಧಿಕಾರಿ ಸಿ.ವಿ. ಮ್ಯಾಗೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಸದಸ್ಯ ಎಸ್.ವಿ.ಸಂಕನೂರ, ಸಂಘಟನಾ ಕಾರ್ಯದರ್ಶಿ ಜಿ.ಡಿ. ದಾಸರ, ಡಯಟ್ ಉಪನ್ಯಾಸಕ ಜಿ.ಎಸ್. ಶಿರ್ಸಿ, ವಿ.ಆರ್. ಭಂಡಾ, ಬಿ.ಕೆ. ಬಳಿಗೇರ ಮುಂತಾದವರು ಉಪಸ್ಥಿತರಿದ್ದರು.

ಜ್ಞಾನೇಶ್ವರ ನೇಮಕ
ಗದಗ:
ಕನ್ನಡ ಜನಾಭಿವೃದ್ಧಿ ವೇದಿಕೆಯ ಗದಗ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನಗರದ ಜ್ಞಾನೇಶ್ವರ ಖೋಕಲೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರೇಮಶ ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಹಾತಲಗೇರಿ ನಾಕಾ, ಚರ್ಚ್ ರಸ್ತೆ, ಪಂಚಾಕ್ಷರಿ ನಗರ, ವಿವೇಕಾನಂದ ರಸ್ತೆ, ಗಣಪತಿಗುಡಿ ಲೈನ್, ಧ್ಯಾಮನಗೌಡ್ರ ಲೈನ್ ಈ ಭಾಗಗಳಲ್ಲಿ ಶನಿವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement