ನ್ಯಾನೋ ಕ್ರಾಂತಿಕಾರಕ ಆವಿಷ್ಕಾರ: ಡಾ.ಆತ್ರೆ
ಕನ್ನಡಪ್ರಭ ವಾರ್ತೆ, ಗದಗ, ಏ. 5
ನ್ಯಾನೋ ಎನ್ನುವುದು ಅತ್ಯಂತ ಕ್ರಾಂತಿಕಾರಕ ಆವಿಷ್ಕಾರ. ಇದು ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಹೊಸ ಕ್ರಾಂತಿಗೆ ನಾಂದಿಯಾಗಿದೆ ಎಂದು ಡಿಆರ್ಡಿಓ ವಿಶ್ರಾಂತ ನಿರ್ದೇಶಕ, ಪದ್ಮಭೂಷಣ ಡಾ.ವಾಸುದೇವ ಆತ್ರೆ ಹೇಳಿದರು.
ಶುಕ್ರವಾರ ಗದಗ ನಗರದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಕಾಲೇಜಿನ ಸಭಾಭವನದಲ್ಲಿ ವಿಶ್ವವಿದ್ಯಾಲಯ ಧನಸಹಾಯದ ಅಡಿಯಲ್ಲಿ 2 ದಿನಗಳ ಕಾಲ ನಡೆವ 'ನ್ಯಾನೋ-ಆವಶ್ಯಕಗಳು' ವಿಚಾರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಒಡಿದರು.
ಇನ್ಫಾರ್ಮೇಶನ್ ಸೈನ್ಸ್ ಮತ್ತು ಮೈಕ್ರೋ-ಬಯಾಲಜಿ ಕ್ಷೇತ್ರಗಳ ಬೆಳವಣಿಗೆಯಿಂದ ನೈಸರ್ಗಿಕ ಪರಿಸರ ಹಾಗೂ ಸಮಾಜದ ಹೊಸ ಸಮಸ್ಯೆ ನಿಭಾಯಿಸಲು, ವಿಧಿ-ವಿಧಾನ ಕಂಡುಹಿಡಿಯಲು ಅನುಕೂಲವಾಗಿದೆ. ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪರಿಕಲ್ಪನೆಗಳು ಧನಾತ್ಮಕ ಹಾಗೂ ಋಣಾತ್ಮಕ ಗುಣಗಳನ್ನು ಹೊಂದಿವೆ. ಇಂದು ವಿಕಸನಗೊಳ್ಳುತ್ತಿರುವ ವಿಜ್ಞಾನದ ಯುಗದಲ್ಲಿ ಹಂತಹಂತವಾಗಿ ಅತಿ ಸೂಕ್ಷ್ಮ ಕಣಗಳನ್ನು ಶೋಧನೆ ಮಾಡಲಾಗುತ್ತಿದೆ. ಇದರಿಂದ ವಿಜ್ಞಾನ ದೊಡ್ಡ ವಸ್ತುಗಳಿಂದ ಸಣ್ಣದರ ಕಡೆಗೆ ಸಾಗುತ್ತಿದೆ. ಆಪ್ಟಿಕಲ್ ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ವಿಜ್ಞಾನಿಗಳು ಘಟನೆಗಳನ್ನು ಮೈಕ್ರೋಸ್ಕೋಪಿಕ್ ಪ್ರಮಾಣದಲ್ಲಿ ಅಳೆಯಲು ಸಾಧ್ಯವಾಯಿತು. ನಂತರ, ಇಲೆಕ್ಟ್ರಾನ್ ಸೂಕ್ಷ್ಮದರ್ಶಕ ಯಂತ್ರದ ಶೋಧನೆಯಿಂದ ವಿಜ್ಞಾನದ ಘಟನಾವಳಿಗಳನ್ನು ನ್ಯಾನೋಮೀಟರ್ ಪ್ರಮಾಣದಲ್ಲಿ ಅಳೆಯಲು ಸಹಾಯಕಾರಿಯಾಯಿತು ಎಂದರು. ಮೊದಲ ಗೋಷ್ಠಿಯಲ್ಲಿ ಜವಾಹರಲಾಲ ನೆಹರು ಅಡ್ವಾನ್ಸ್ ರಿಸರ್ಚ್ ಸೆಂಟರಿನ ವಿಜ್ಞಾನಿ ಡಾ.ಚಂದ್ರಹಾಸ ನಾರಾಯಣ ನ್ಯಾನೋ ರಚನೆ ಹಾಗೂ ರಾಮನ್ ಪರಿಣಾಮ ಕುರಿತು, 2ನೇ ಗೋಷ್ಠಿಯಲ್ಲಿ ಧಾರವಾಡ ಪ್ರಾಂತೀಯ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಉದಯ ರಾಯಕರ ನ್ಯಾನೋ-ಸೆನ್ಸರ್ಸ್ ಮತ್ತು ಆವಶ್ಯಕಗಳು ಕುರಿತು ತಮ್ಮ ವಿಚಾರ ಮಂಡಿಸಿದರು.
ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ.ವಿ.ಐ. ಕುರಗೋಡ ಅಧ್ಯಕ್ಷತೆ ವಹಿಸಿದ್ದರು. ಪಿಯು ಕಾಲೇಜು ಪ್ರಾಚಾರ್ಯ ಎಂ.ಎಂ. ಹೊಳ್ಳಿಯವರ, ಪ್ರೊ.ಕೆ.ಎಸ್.ಎನ್. ಮೂರ್ತಿ, ಡಾ.ಐ.ಐ. ಪಟ್ಟಣಶೆಟ್ಟಿ, ಎಸ್.ಬಿ. ಸಂಶಿಮಠ, ಎಸ್.ವಿ. ಸಂಕನೂರ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್.ಎಸ್. ಯಂಕಚಿ ಸ್ವಾಗತಿಸಿದರು. ಐ.ಐ. ಪಟ್ಟಣಶೆಟ್ಟಿ ಪರಿಚಯಿಸಿದರು. ಬಿಬಿಎ ಕಾಲೇಜಿನ ಪ್ರಾಚಾರ್ಯ ಎಂ.ಬಿ. ಚನ್ನಪ್ಪಗೌಡರ ವಂದಿಸಿದರು. ತೇಜೇಸ್ವನಿ ಗಡ್ಡಗಿರಿಮಠ ಮತ್ತು ಕವಿತಾ ಮಲ್ಲಪ್ಪನವರ ನಿರೂಪಿಸಿದರು.