ವಿದ್ಯಾರ್ಥಿ ಮುಖಂಡರ ಮೇಲೆ ಹಲ್ಲೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 5
ಕೊಲ್ಕತ್ತಾದಲ್ಲಿ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾ ನಿರತರ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ಕ್ರೂರವಾಗಿ ಲಾಠಿಚಾರ್ಜ್ ನಡೆಸಿ ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಸುದಿಪ್ತೋ ಗುಪ್ತಾರವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ ಶುಕ್ರವಾರ ಪಟ್ಟಣದ ಕೆ.ಕೆ. ವೃತ್ತದಲ್ಲಿ ಮಮತಾ ಬ್ಯಾನರ್ಜಿಯವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐನ ಜಿಲ್ಲಾಧ್ಯಕ್ಷ ಪೀರು ರಾಠೋಡ, ಶಿವು ಚವ್ಹಾಣ ಮಾತನಾಡಿ, ಪಶ್ಚಿಮ ಬಂಗಾಳದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸಿ ಪ್ರತಿಭಟನಟನೆ ನಡೆಸುತ್ತಿದ್ದವರನ್ನು ಬಂಧಿಸಿ ಬಸ್ನಲ್ಲಿ ಅಮಾನುಷವಾಗಿ ಲಾಠಿಚಾರ್ಜ್ ನಡೆಸಲಾಗಿದೆ.
ಪ.ಬಂಗಾಳದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ ನಡೆಯುತ್ತಿದ್ದ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು 2 ವರ್ಷಗಳಿಗೊಮ್ಮೆ ಸರ್ಕಾರ ತೀರ್ಮಾನಿಸಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡಲು ಹೊರಟ್ಟಿತ್ತು. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಗೂಂಡಾಗಳು ಶಿಕ್ಷಣ ಸಂಸ್ಥೆಗಳಲ್ಲಿ ಅರೆ ಫ್ಯಾಸಿಸ್ಟ್ ದಾಳಿಗಳನ್ನು ನಡೆಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನೆಡೆಸಿ ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಆರೋಪಿಸಿದರು.
ಬಾಲು ರಾಠೋಡ, ದಾವಲಸಾಬ ತಾಳಿಕೋಟಿ, ಶಿವಾಜಿ ಗಡ್ಡದ, ವೀರೇಶ ಕುಂಬಾರ, ಕವಿತಾ ಬಂಕದ, ಸಕ್ರಪ್ಪ ಮಾಳೋತ್ತರ, ಬಾಲಕೃಷ್ಣ ಜಾಡಬಂಡಿ, ಪ್ರಕಾಶ ಹೆಳವರ, ಬಸವರಾಜ ಸವಣೂರ, ಮೈಬು ಹವಾಲ್ದಾರ್, ಡಿವೈಎಫ್ಐ ರೋಣ ತಾಲೂಕು ಅಧ್ಯಕ್ಷ ಬಿ.ಎಸ್.ಶೀಲವಂತರ ಮುಂತಾದವರು ಉಪಸ್ಥಿತರಿದ್ದರು.