ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿರಹಟ್ಟಿಯಲ್ಲಿ ಚುನಾವಣೆ ಕಾವ್ಛು

Vishwanath S
Updated On : 6 Apr 2013, 11:41 am

ಕನ್ನಡಪ್ರಭ ವಾರ್ತೆ, ಗದಗ, ಏ. 5
ಜಿಲ್ಲೆಯಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕ ಭಾಗದಲ್ಲಿಯೇ ಉತ್ತಮ ರೇಷ್ಮೆ ಮಾರುಕಟ್ಟೆಯನ್ನು ಹೊಂದಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲೀಗ ಚುನಾವಣೆಯ ಕಾವು ಏರುತ್ತಿದೆ. ಇದು 2008ರ ಕ್ಷೇತ್ರ ಮರುವಿಂಗಡಣೆಯ ನಂತರ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ಈ ಕ್ಷೇತ್ರದಲ್ಲಿಯೂ ಹಿಂದುಳಿದವರ್ಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಅಭ್ಯರ್ಥಿಗಳಿಗೆ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗುವ ಮೊದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ.
1957ರಲ್ಲಿ ಲೀಲಾವತಿ ಮಾಗಡಿ 16,664 ಮತ ಪಡೆದು ಆಯ್ಕೆಯಾಗಿದ್ದರು. 1962ರಲ್ಲಿ ಕೆ.ಎಸ್. ವೀರಯ್ಯ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 17,347 ಮತ ಪಡೆದು ಆಯ್ಕೆಯಾಗಿದ್ದರು. 1967ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಸ್.ವಿ. ಕಾಶಿಮಠ 23,646 ಮತ ಪಡೆದು ಆಯ್ಕೆಯಾಗಿದ್ದರು. 1972ರಲ್ಲಿ ವಿ.ವಿ. ವಾಯಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 21,314 ಮತ ಪಡೆದು ಆಯ್ಕೆಯಾಗಿದ್ದರು.
1978ರಲ್ಲಿ ಉಪನಾಳ ಗೂಳಪ್ಪ ಕಾಂಗ್ರೆಸ್‌ನಿಂದ 28,606 ಮತ ಪಡೆದು ಗೆಲುವು ಸಾಧಿಸಿದ್ದರು. 1983ರಲ್ಲಿ ಮತ್ತೆ ಗೂಳಪ್ಪನವರು ಪಕ್ಷೇತರರಾಗಿ ಸ್ಪರ್ಧಿಸಿ 25,825 ಮತ ಪಡೆದು ಆಯ್ಕೆಯಾಗಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಬಿ. ಬಾಳಿಕಾಯಿ 24,362 ಮತ ಪಡೆದು ಆಯ್ಕೆಯಾಗಿದ್ದರು. 1989ರಲ್ಲಿ ಎಸ್.ಎನ್. ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 24,882 ಮತ ಪಡೆದು ಗೆಲುವು ಸಾಧಿಸಿದ್ದರು. 1994ರಲ್ಲಿ ಜನತಾದಳದ ಜಿ.ಎಂ. ಮಹಾಂತಶೆಟ್ಟರ್ 26,449 ಮತ ಪಡೆದು ಗೆಲವು ಹೊಂದಿದ್ದರು. 1999 ಹಾಗೂ 2004 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ.ಎಸ್. ಗಡ್ಡದೇವರಮಠ ಆಯ್ಕೆಯಾಗಿದ್ದರು. 2008ರ ಚುನಾವಣೆಯಲ್ಲಿ ಕ್ಷೇತ್ರ ಮರುವಿಂಗಡಣೆಯಿಂದ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡು ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಮಣ್ಣ ಲಮಾಣಿ ಆಯ್ಕೆಯಾಗಿದ್ದರು.
2008ರಲ್ಲಿ ಬಿಜೆಪಿ ಗೆಲವು: 2008ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಬಿಜೆಪಿ ಪರವಾಗಿ ಬೀಸಿದ ಅಲೆ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಬಿಎಸ್‌ಆರ್ ಸಂಸ್ಥಾಪಕ ಶ್ರೀರಾಮುಲು ಅವರ ಪ್ರಭಾವದಿಂದ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಹಾಗೂ ಲಿಂಗಾಯತರ ಮತಗಳು ಒಟ್ಟಿಗೆ ಸಮ್ಮಿಳಿತಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸೋಲುವಂತಾಯಿತು. ಆದರೆ, ಈ ಬಾರಿ ಬಿಎಸ್‌ವೈ, ಶ್ರೀರಾಮುಲು ಬಿಜೆಪಿಯಲ್ಲಿ ಇಲ್ಲ. ಹಾಗಾಗಿ ಬಿಜೆಪಿ ಗೆಲುವು ಸುಲಭದ ಕೆಲಸವಲ್ಲ.
ಎಲ್ಲರ ಮೇಲೆ ಪ್ರೀತಿ: ಈ ಕ್ಷೇತ್ರದ ಜನತೆ ಎಲ್ಲರ ಮೇಲೆಯೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, 2 ಬಾರಿ ಜನತಾ ಪರಿವಾರ, 3 ಬಾರಿ ಪಕ್ಷೇತರರು, 6 ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ.
ಈ ಬಾರಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆಯಾದರೂ ಪ್ರಾದೇಶಿಕ ಪಕ್ಷಗಳು ಪ್ರಬಲ ಪೈಪೋಟಿ ನೀಡುವ ಹಿನ್ನೆಲೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದರೂ ಆಶ್ಚರ್ಯ ಪಡಬೇಕಿಲ್ಲ.
ಈ ಕ್ಷೇತ್ರವು ಶಿರಹಟ್ಟಿ ತಾಲೂಕು ಹಾಗೂ ಮುಂಡರಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿ ಹಾಗೂ ಲಕ್ಷ್ಮೇಶ್ವರ ಪುರಸಭೆ ಮತ್ತು ಲಕ್ಷ್ಮೇಶ್ವರ ಹೋಬಳಿಯ ಗ್ರಾಮಗಳನ್ನು ಒಳಗೊಂಡಿದೆ.

ಕಳೆದ 5 ವರ್ಷಗಳ ಅವಧಿಯಲ್ಲಿ ಶಿರಹಟ್ಟಿ ತಾಲೂಕಿನ ಅಭಿವೃದ್ಧಿ ಕುಂಠಿತವಾಗಿದೆ. ಹಿಂದುಳಿದ ತಾಲೂಕೆಂಬ ಹಣೆ ಪಟ್ಟಿಯನ್ನು ಕಿತ್ತೊಗೆಯಲು ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರದ ಸಾಧನೆ ತಾಲೂಕಿನಲ್ಲಿ ತೀರಾ ಗೌಣವಾಗಿದ್ದು, ಶಾಸಕ ರಾಮಣ್ಣ ಲಮಾಣಿಯವರು ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳು ಕಳೆಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೇಂದ್ರ ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಆಳ್ವಿಕೆ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ.  
-ಜಿ.ಎಸ್. ಗಡ್ಡದೇವರಮಠ
ಮಾಜಿ ಶಾಸಕರು, ಶಿರಹಟ್ಟಿ.ಅಧ್ಯಕ್ಷರು, ಗದಗ ಜಿಲ್ಲಾ ಕಾಂಗ್ರೆಸ್

ಗದಗ ಜಿಲ್ಲೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ವಿಧಾನಸಭಾ ಖಾತೆಯನ್ನು ಶಿರಹಟ್ಟಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತೆರೆಯಲಿದೆ. ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಸಹಕಾರಿಯಾಗಲಿವೆ. ಶಿರಹಟ್ಟಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕೇವಲ ಕಾಗದದಲ್ಲಿ ಮಾತ್ರ ಮುಗಿದಿವೆ. ಲಕ್ಷ್ಮೇಶ್ವರ ಬಜಾರ್ ರಸ್ತೆ ಕಾಮಗಾರಿಯಾಗದೆ 3 ವರ್ಷ ಕಳೆದರೂ ಶಾಸಕರು ಇತ್ತ ಗಮನ ನೀಡಲಿಲ್ಲ. ಇಲ್ಲಿನ ವ್ಯಾಪರಸ್ಥರು ಹಾಗೂ ಸಾರ್ವಜನಿಕರು ನಿತ್ಯ ಶಪಿಸುತ್ತ ಸಂಚರಿಸುತ್ತಿರುವುದು ಇವರ ಕಣ್ಣಿಗೆ ಕಾಣದಿರುವುದು ನೋವಿನ ಸಂಗತಿಯಾಗಿದೆ. ತಾಲೂಕಿಗೆ ಬಂದ ಅನುದಾನ ಸಮರ್ಪಕ ಬಳಕೆಯಾಗದಿರುವುದು ತಾಲೂಕಿನ ದುರದೃಷ್ಟ. ಜನತೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ.
-ಗಂಗಣ್ಣ ಮಹಾಂತಶೆಟ್ಟರ್ ಮಾಜಿ ಶಾಸಕರು, ಶಿರಹಟ್ಟಿ.


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement