21 ರಿಂದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ
ಗದಗ: ನಗರದ ಜ. ತೋಂಟದಾರ್ಯ ಮಠದ ಜಾತ್ರೆ ನಿಮಿತ್ತ ಏ. 21, 22 ರಂದು ಜಾತ್ರಾ ಸಮಿತಿ ಹಾಗೂ ಆರೋಗ್ಯ ಉಪಸಮಿತಿ ವತಿಯಿಂದ ಉಚಿತ ಆರೋಗ್ಯ ಜಾಗೃತಿ, ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎ. ಚೆಟ್ಟಿ ಹಾಗೂ ಆರೋಗ್ಯ ಉಪಸಮಿತಿ ಸದಸ್ಯ ಡಾ. ಅನಂತ ಶಿವಪುರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಏ. 21 ರಂದು ಜ. ತೋಂಟದಾರ್ಯ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಬೆಳಗ್ಗೆ 9.30 ಗಂಟೆಗೆ ಜ. ತೋಂಟದ ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಆರೋಗ್ಯ ಶಿಬಿರಗಳ ಕಾರ್ಯಕ್ರಮಕ್ಕೆ ಚಾಲನೆ ದೊರೆಯುವುದು. ಧಾರವಾಡದ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹಾಗೂ ಅನುಪಮ ಪಾಂಡುರಂಗಿ ನೇತೃತ್ವದಲ್ಲಿ ಮನೋರೋಗಿಗಳ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ದುಶ್ಚಟ ನಿವಾರಣೆ ಸಲಹೆ ಸೂಚನೆ ಶಿಬಿರ ಮತ್ತು ಡಾ. ವಿಶ್ವನಾಥ ಶಿವನಗುತ್ತಿ, ಡಾ. ಸುಷ್ಮಾ ಬಿ. ಇವರಿಂದ ಬಂಜೆತನ ನಿವಾರಣೆ ಹಾಗೂ ತಪಾಸಣೆ, ಸಲಹೆ ಸೂಚನೆ ಶಿಬಿರ, ಹುಬ್ಬಳ್ಳಿಯ ಡಾ. ವಿಕ್ರಂ ಹರಿದಾಸ ಇವರಿಂದ ಉಚಿತವಾಗಿ ಕೀಲು (ಸಂಧು) ನೋವು ರೋಗಿಗಳ ಶಿಬಿರ, ಗದಗ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಚಿಕ್ಕಮಕ್ಕಳ ಹೃದಯ ರೋಗ ತಪಾಸಣೆ ಶಿಬಿರ ನಡೆಯಲಿದೆ. ಈ ಶಿಬಿರದ ನೇತೃತ್ವವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ.ಬಿ. ಚೆನ್ನಶೆಟ್ಟಿ, ಚಿಕ್ಕಮಕ್ಕಳ ತಜ್ಞ ಡಾ. ಸಂಜೀವ ಜೋಶಿ, ಡಾ. ಶಿವಕುಮಾರ ಮಾನ್ವಿ, ಡಾ. ಪ್ರಭು ಬೂಸನೂರಮಠ ವಹಿಸುವರು. ಏ. 22 ರಂದು ಬೆಳಗ್ಗೆ 10 ಗಂಟೆಗೆ ತೋಂಟದಾರ್ಯ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ, ನೇತ್ರದಾನ ಕಾರ್ಯಕ್ರಮ ನಡೆಯಲಿದೆ. ನಗರದ ಮುಂಡರಗಿ ರಸ್ತೆಯಲ್ಲಿರುವ ಜ. ತೋಂಟದಾರ್ಯ ಎಂಜನಿಯರಿಂಗ್ ಕಾಲೇಜಿನಲ್ಲಿ ಉಚಿತ ರಕ್ತ ತಪಾಸಣೆ, ರಕ್ತದಾನ ಶಿಬಿರ ಅಲ್ಲದೇ ಡಾ. ಗುರುಪ್ರಸಾದ ಅವರಿಂದ ಪ್ರಥಮ ಚಿಕಿತ್ಸೆ ವಿಧಾನ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಈ ಎಲ್ಲ ಆರೋಗ್ಯ ಸಂಬಂಧಿ ಶಿಬಿರಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಾ. ಅನಂತ ಶಿವಪುರ ಹಾಗೂ ಡಾ. ಆರ್.ಟಿ. ಪವಾಡಶೆಟ್ರ ಪ್ರಕಟಣೆಯ ಮೂಲಕ ಕೋರಿದ್ದಾರೆ.
ಪಿಎಸ್ಐ ಅಂಬಿಗೇರಗೆ ಬೀಳ್ಕೊಡುಗೆ
ನರೇಗಲ್ಲ: ಸಿಬ್ಬಂದಿ, ಉನ್ನತ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಜತೆ ಉತ್ತಮ ಸಂಬಂಧ ಹೊಂದಿದ್ದ ಅಧಿಕಾರಿ ವರ್ಗಾವಣೆ ಆಗುತ್ತಿದ್ದಾರೆ. ಸರ್ಕಾರಿ ಸೇವೆಯಲ್ಲಿ ಇದೆಲ್ಲ ಸಾಮಾನ್ಯ ಎಂದು ರೋಣ ಸಿಪಿಐ ಮಲ್ಲನಗೌಡ ನಾಯ್ಕರ ಹೇಳಿದರು. ಶನಿವಾರ ಸಂಜೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಎಸ್.ಎನ್. ಅಂಬಿಗೇರ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಥಳೀಯ ತಂಟೆ - ತಕರಾರುಗಳಿಗೆ ತಾವೇ ಸ್ಪಂದಿಸಿದ ಅಂಬಿಗೇರ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರನ್ನು ಬಿಟ್ಟುಕೊಡಲು ನಮಗೂ ನೋವಾಗುತ್ತಿದೆ ಎಂದರು. ಸನ್ಮಾನ ಸ್ವೀಕರಿಸಿದ ಅಂಬಿಗೇರ ಮಾತನಾಡಿದರು. ರೋಣ ಪಿಎಸ್ಐ ಎಂ.ಎನ್. ಹತ್ತಿಕಟಗಿ, ಎಎಸ್ಐ ಬಿ.ಬಿ. ಕರಮುಡಿ, ಸಿ.ಎಂ. ಸಿಸ್ತಗಾರ, ಮಹಿಳಾ ಎಎಸ್ಐ ಎಸ್.ವಿ. ಕುಲಕರ್ಣಿ, ವಿರೂಪಣ್ಣ ಪಿಡಗೊಂಡ, ವೀರಯ್ಯ ಹುಯಿಲಗೋಳಮಠ, ಬೆಟಗೇರಿ ಉಪಸ್ಥಿತರಿದ್ದರು.
ದಾಳಿ: ಓರ್ವನ ಬಂಧನ
ಗಜೇಂದ್ರಗಡ: ಪಟ್ಟಣದ ಜನತಾ ಕಾಂಪ್ಲೆಕ್ಸ್ ಬಳಿಯ ಹೋಟೆಲ್ವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೋಲಿಸರು ಭಾನುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ ರು. 3 ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಆರೋಪಿ ನಾರಾಯಣ ಮ್ಯಾಕಲ್ ಎಂಬಾತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗುಬಾಯಿ ನಿಧನ
ಮುಂಡರಗಿ: ತಾಲೂಕಿನ ಕಲಕೇರಿ ಗ್ರಾಮದ ಗಂಗುಬಾಯಿ ಅಚ್ಚಪ್ಪ ದೇಸಾಯಿ ಶನಿವಾರ ನಿಧನರಾದರು. ಮೃತರು ಪುತ್ರರು, ಪುತ್ರಿಯರು ಅಪಾರ ಬಂಧು ಬಳಗ ಹೊಂದಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಅಂದಪ್ಪ ಬೆಲ್ಲದ, ಕಾಂತರಾಜ ಹಿರೇಮಠ, ರಜನೀಕಾಂತ ದೇಸಾಯಿ, ಎಸ್.ವಿ. ಪಾಟೀಲ ಸಂತಾಪ ಸೂಚಿಸಿದ್ದಾರೆ.
ರುದ್ರಾಪುರಮಠ ನಿಧನ
ರೋಣ: ತಾಲೂಕಿನ ತಳ್ಳಿಹಾಳ ಗ್ರಾಮದ ನಿವಾಸಿ ಅಂಕಲಯ್ಯ ಬಸಯ್ಯ ರುದ್ರಾಪುರಮಠ ಅವರು 73ನೇ ವಯಸ್ಸಿನಲ್ಲಿ ಈಚೆಗೆ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದರು.