ಕಪ್ಪತಗುಡ್ಡ ವನ್ಯಧಾಮ ಯಾವಾಗ?
ಕನ್ನಡಪ್ರಭ ವಾರ್ತೆ, ಗದಗ, ಏ. 7
ಔಷಧಿ ಸಸ್ಯಗಳ ಬೀಡು ಎಂದೇ ಹೆಸರಾಗಿರುವ ಕಪ್ಪತಗುಡ್ಡ (ಕಪೋತಗಿರಿ) ದಲ್ಲಿ ನೂರಾರು ಜಾತಿಯ ಔಷಧಿ ಸಸ್ಯಗಳು, ಹಲವು ಪ್ರಾಣಿ, ಪಕ್ಷಿ ಸಂಕುಲಗಳಿವೆ. ಆದರೆ, ಇಲ್ಲಿಯವರೆಗೂ ಕಪ್ಪತಗುಡ್ಡವನ್ನು ವನ್ಯಧಾಮವನ್ನಾಗಿಸದೇ ಇರುವುದು ಈ ಭಾಗದ ಪ್ರಜ್ಞಾವಂತ ನಾಗರಿಕರಿಗೆ ನೋವುಂಟು ಮಾಡಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಪ್ಪತಗುಡ್ಡದಲ್ಲಿ ಸಿಗದಿರುವ ಔಷಧಿ ಸಸ್ಯೆಗಳೇ ಇಲ್ಲ ಎನ್ನುವುದು ಆಯುರ್ವೇದ ವೈದ್ಯರ ಅಭಿಪ್ರಾಯ. ಆದರೆ, ಇಂದು ಈ ಕಪ್ಪತಗುಡ್ಡದ ಪ್ರದೇಶ ಅಳಿವಿನಂಚಿನಲ್ಲಿರುವುದು ಮಾತ್ರ ವಿಷಾದನೀಯ.
33 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿರುವ ಕಪ್ಪತಗುಡ್ಡದಲ್ಲಿ 33 ಗ್ರಾಮಗಳಿದ್ದು, ಗದಗ ತಾಲೂಕಿನ 2134.86 ಹೆಕ್ಟೇರ್ ಪ್ರದೇಶದಲ್ಲಿ ಬರುವ ಸೊರಟೂರು, ಶಿರುಂಜಾ, ಬೆಳದಡಿ, ಕಬುಲಾಯತಕಟ್ಟಿ, ನಭಾಪುರ ಹಾಗೂ ಶಿರಹಟ್ಟಿ ತಾಲೂಕಿನ 4975.13 ಹೆಕ್ಟೇರ್ ಪ್ರದೇಶದಲ್ಲಿ ಬರುವ ಕಡಕೋಳ, ಜಲ್ಲಿಗೇರಿ, ಮಜ್ಜೂರು, ಕುಸಲಾಪುರ, ವರವಿ, ಟಿ. ಬಾವನೂರ, ಭಾನವೂರ ಮತ್ತು ಮುಂಡರಗಿ ತಾಲೂಕಿನ 16291.68 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಬರುವ ಬಾಗೇವಾಡಿ, ಬಿದರಳ್ಳಿ, ಗುಡ್ಡದ ಬೂದಿಹಾಳ, ಜಾಲವಾಡಗಿ, ಕೆಲೂರು, ಮುಂಡವಾಡ, ಮುರಡಿ, ಚಾಗಿನಕೆರೆ, ಹಮ್ಮಿಗಿ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಹಾರೋಗೇರಿ, ಬಿಡ್ನಾಳ, ಕಲಕೇರಿ, ಕೊರ್ಲಹಳ್ಳಿ, ಮುಷ್ಟಿಕೊಪ್ಪ, ಶಿಂಗ್ಟಾಲೂರು, ಅತ್ತಿಕಟ್ಟಿ, ಡಂಬಳ, ದಿಂಡೂರು, ಡೋಣಿ ಗ್ರಾಮಗಳು ಈ ಕಪ್ಪತಗುಡ್ಡ ಪ್ರದೇಶದಲ್ಲಿವೆ.
350ಕ್ಕೂ ಹೆಚ್ಚು ಔಷಧಿ ಸಸ್ಯ: ಕಪ್ಪತಗುಡ್ಡದಲ್ಲಿ ವಿವಿಧ ಬಗೆಯ ಔಷಧಿ ಸಸ್ಯಗಳಿದ್ದು, ಇಲ್ಲಿಯವರೆಗೆ 350ಕ್ಕೂ ಹೆಚ್ಚು ಔಷಧಿ ಸಸ್ಯಗಳನ್ನು ಕಂಡುಹಿಡಿಯಲಾಗಿದೆ. ಅವುಗಳಲ್ಲಿ ಹನುಮನ ಹಸ್ತ, ಹೊರಮುಚಗ, ಒಳಮುಚಗ, ಬೆಟ್ಟದಾವರೆ, ಚಿತ್ರಮೂಲನಕಡ್ಡಿ, ಅನಂತಮೂಲ, ಅಜವಾನ, ಆಡುಸೋಗೆ, ಅಮೃತ ಬಳ್ಳಿ, ಅಗ್ನಿಮಂತ, ಒಂದೆಲಗ, ಬಸನಪಾದ, ಕಾಡುಬಾದಮೆ, ಕರಿಲೆಕ್ಕಿ, ತಾರೋಕಾಯಿ, ತಪ್ಪಸ್ಸಿ, ದಾಲಚಿನ್ನಿ, ದೇವದಾರೆ, ನೆಲಬೇವು, ಪಾರಿಜಾತ, ಚದುರಂಗ, ಮದ್ದುಗುಣಕಿ, ಮದುನಾಸಿನಿ, ಮಾದಾಳಫಲ, ಯಕ್ಕಿ, ರಕ್ತ ಚಂದನ, ಶತಾವರಿ, ಶಿರಸಲ, ಶಿವನಿ, ಶಂಕರಪುಷ್ಠಿ ಮುಂತಾದವುಗಳು ನೆಲೆನಿಂತಿವೆ.
ಪ್ರಾಣಿ, ಪಕ್ಷಿಗಳ ಆಶ್ರಯ ತಾಣ: ಕಪ್ಪತಗುಡ್ಡದಲ್ಲಿ ಇಂದಿಗೂ ಹಲವು ಪ್ರಾಣಿ ಪಕ್ಷಿಗಳು ಆಶ್ರಯ ಪಡೆದಿವೆ. 4 ಚಿರತೆ, 370 ಕೃಷ್ಣಮೃಗ, 85 ನರಿ, 40 ತೋಳ, 66 ಕಾಡುಕುರಿ, 35 ಚುಕ್ಕೆಜಿಂಕೆ, 12 ಕತ್ತೆಕಿರುಬ, 295 ಕಾಡುಹಂದಿ, 165 ಮುಳ್ಳುಹಂದಿ, 13 ಕಾಡು ಬೆಕ್ಕು, ಮಂಗ ಹಾಗೂ ಪಕ್ಷಿಗಳಾದ ನವಿಲು, ಪಾರಿವಾಳ, ಗಿಳಿ, ಗುಬ್ಬಿ, ಲಿಟಲ್ ಎಗ್ರೇಟ್, ಕಾಟಲ್ ಎಗ್ರೇಟ್, ಹದ್ದು, ಬ್ಕಾಕ್ ಡ್ರಾಂಗೋ ಹದ್ದು, ಹನ್ನೀಬಿ ಮುಂತಾದ ಪಕ್ಷಿಗಳಿವೆ ಎನ್ನುವುದು 2006ರಲ್ಲಿ ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಸಾಬೀತಾಗಿದೆ.
-ಶಿವಕುಮಾರ ಕುಷ್ಟಗಿ