ಬಿಜೆಪಿ ಗೆಲುವಿಗೆ ಪಣ: ಬಂಡಿ
ಗಜೇಂದ್ರಗಡ: ಎಲ್ಲರೂ ಸುಖಿಗಳಾಗಲಿ, ಆರೋಗ್ಯವಂತಾಗಿರಲಿ, ಎಲ್ಲರಿಗೂ ಒಳಿತಾಗಿರಲಿ ಎಂಬುದು ಬಿಜೆಪಿ ಧ್ಯೇಯ. ಪಕ್ಷದ ಗೆಲುವಿಗೆ ಇದು ನೆರವಾಗಲಿದೆ. ಇದನ್ನರಿತ ಎಲ್ಲ ನಾಗರಿಕರು ಬಿಜೆಪಿ ಗೆಲುವಿಗೆ ಪಣ ತೊಟ್ಟಿದ್ದಾರೆ ಎಂದು ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು. ಪಟ್ಟಣದಲ್ಲಿ ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅವರ ಪರವಾಗಿ 8ನೇ ವಾರ್ಡಿನ ಮನೆ ಮನೆಗೆ ತೆರಳಿ ಮತ ಯಾಚಿಸಿ ಮಾತನಾಡಿದ ಅವರು, ರೋಣ ಮತಕ್ಷೇತ್ರದ 2 ಅವಧಿಯಲ್ಲಿ ನೈಜ ಅಭಿವೃದ್ಧಿ ಹೊಸ ಭಾಷ್ಯ ಬರೆದ ಬಿಜೆಪಿಯನ್ನು ಮತ್ತೆ ಪ್ರತಿಷ್ಠಾಪಿಸಲು ಮುಂದಾಗುವ ಮೂಲಕ ಇತಿಹಾಸ ಸೃಷ್ಟಿಸುವಂತೆ ಮನವಿ ಮಾಡಿದರು. ರೋಣ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೋಘ ಗೆಲವು ಸಾಧಿಸುತ್ತಾರೆ, ಅನುಮಾನವಿಲ್ಲ. ಮತ್ತೊಮ್ಮೆ ಬಿಜೆಪಿ ಕೈಹಿಡಿದು ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಪುಷ್ಪಾವತಿ ಭಾಂಡಗೆ, ಸದಸ್ಯೆ ಕವಿತಾ ಜಾಲಿಹಾಳ, ವಿಜಯಲಕ್ಷ್ಮಿ ಚಟ್ಟೇರ, ದೀಪಾ ಗೋಯಲ್, ಬಸಮ್ಮ ಸಾಲಿಮಠ, ಲಲಿತಾ ಪಾಟೀಲ, ಮಂಜುನಾಥ ಬಡಿಗೇರ ಉಪಸ್ಥಿತರಿದ್ದರು.