ಬಿಜೆಪಿಯಿಂದ ರಾಜ್ಯದಲ್ಲಿ ಅಪಾರ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಏ. 7
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಗಣನೀಯ ಸಾಧನೆ ಮಾಡಿದ್ದು, ಅಭಿವೃದ್ಧಿ ಕಾರ್ಯಗಳೇ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಹೇಳಿದರು.
ಪಟ್ಟಣದ ಹೊರವಲಯದ ರಾಮಣ್ಣ ಡಂಬಳ ಅವರ ಹೊಲದಲ್ಲಿ ಭಾನುವಾರ ಏರ್ಪಡಿಸಿದ್ದ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಲ್ಲ ವರ್ಗದ ಜನರ ಏಳ್ಗೆಗೆ ಶ್ರಮಿಸಿದೆ. 50 ವರ್ಷಗಳಿಂದ ರಾಜ್ಯವನ್ನಾಳಿದ ಯಾವ ಸರ್ಕಾರವೂ ಮಾಡದ ಸಾಧನೆಯನ್ನು ಬಿಜೆಪಿ ಮಾಡಿದೆ. ಜನತೆಯ ಶ್ರೆಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಗೊಳಿಸಿದೆ ಎಂದರು. ಈ ಬಾರಿ ಸರ್ಕಾರದ 5 ವರ್ಷಗಳ ಸಾಧನೆ ಪಟ್ಟಿ ಹಿಡಿದು ಮತ ಕೇಳುತ್ತೇವೆ ಎಂದ ಅವರು, ರೈತರ ಅನುಕೂಲಕ್ಕಾಗಿ ಭೂ ಚೇತನ ಯೋಜನೆ, ರು. 25 ಸಾವಿರ ವರೆಗಿನ ರೈತರ ಸಾಲ ಮನ್ನಾ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ದಲಿತರಿಗೆ, ವೃದ್ಧರಿಗಾಗಿ ಯೋಜನೆಗಳನ್ನು ಜಾರಿಗೆ ತಂದಿದೆ. ತಾಲೂಕಿನ ಪ್ರತಿಯೊಂದು ಗ್ರಾಮೀಣ ಪ್ರದೇಶದ ರಸ್ತೆ, ಗಟಾರ, ಕೆರೆ ಹೂಳು, ಚೆಕ್‌ಡ್ಯಾಂ ನಿರ್ಮಾಣಕ್ಕೆಂದು ಕೋಟಿಗಟ್ಟಲೆ ಅನುದಾನ ಹರಿದು ಬಂದಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ತಾಲೂಕನ್ನು ಪ್ರಗತಿಯತ್ತ ಕೊಂಡೊಯ್ದ ರಾಮಣ್ಣ ಲಮಾಣಿ ಅವರಿಗೆ ಈ ಬಾರಿ ಹೆಚ್ಚಿನ ಮತ ನೀಡುವಂತೆ ಕರೆ ನೀಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರು. 1 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿ ಸರ್ವರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ದೇಶದಲ್ಲಿ ಮುಂದೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲೇ ಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಶಾಸಕ ರಾಮಣ್ಣ ಲಮಾಣಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖರು ಬಿಜೆಪಿ ಸೇರ್ಪಡೆಗೊಂಡರು. ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯೆ ಕಮಲವ್ವ ಸಜ್ಜನರ, ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಆರ್.ಎಫ್. ಪುರಾಣಿಕಮಠ, ವೈ.ಫ್. ಹಂಜಿ, ಬಸವರಾಜ ತಳವಾರ, ರಾಮಣ್ಣ ಡಂಬಳ, ದೇವಣ್ಣ ಬಳಿಗಾರ, ಸೋಮಣ್ಣ ಮುಳಗುಂದ, ತಾಪಂ ಸದಸ್ಯ ನಿಂಬಣ್ಣ ಮಡಿವಾಳರ, ಶಶಿಧರ ರಾನಡೆ, ಬೀರಪ್ಪ ಸ್ವಾಮಿ, ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ, ತಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ, ನಾಗರಾಜ ಲಕ್ಕುಂಡಿ, ಈಶ್ವರ ಲಮಾಣಿ, ಮೋಹನ್ ಗುತ್ತೆಮ್ಮನವರ, ಶಿವಾನಂದ ಮೊರಬದ, ಮೈಲಾರೆಪ್ಪ ಅಗಡಿ ಇದ್ದರು.