ವಿವಿಧತೆಯಲ್ಲಿ ಏಕತೆ ನಮ್ಮ ಸಂಸ್ಕೃತಿ ಜೀವಾಳ
ಕನ್ನಡಪ್ರಭ ವಾರ್ತೆ, ಗದಗ, ಏ. 7
ವಿವಿಧತೆಯಲ್ಲಿ ಏಕತೆ ಎಂಬ ತತ್ವಕ್ಕೆ ದೇಶಿ ಸಂಸ್ಕೃತಿ ಪೂರಕವಾಗಿದೆ. ವೇಷ-ಭಾಷೆಗಳು ಬೇರೆ ಬೇರೆಯಾದರೂ ಅದೆಲ್ಲವನ್ನು ಒಂದೆಡೆ ಹಿಡಿದಿಡುವ ಸಾಂಸ್ಕೃತಿಕ ಹೃದಯಗಳ ಅಂತಃಸತ್ವ ಒಂದೇ ಆಗಿರುವುದು ನಮ್ಮ ಸಂಸ್ಕೃತಿಯ ಜೀವಾಳವಾಗಿದೆ ಎಂದು ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ 2113ನೇ ಶಿವಾನುಭವದಲ್ಲಿ ಕರ್ನಾಟಕ ಸೇರಿ ದೇಶದ 6 ರಾಜ್ಯಗಳ ನೂರು ಕಲಾವಿದರಿಂದ ನಡೆದ ದೇಶಿ ಸಂಸ್ಕೃತಿಯ ನೃತ್ಯ ಪ್ರದರ್ಶನ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಮಾತನಾಡಿದರು.
ನುರಿತ 100 ಯುವ ನೃತ್ಯ ಕಲಾವಿದರಿಂದ ಮಹಾರಾಷ್ಟ್ರದ ಲಾವಣಿ, ಬಾರೂಢ ನೃತ್ಯ, ಗೊಂದಳಿ ನೃತ್ಯ, ರಾಜಸ್ಥಾನದ ಘಮರ ನೃತ್ಯ, ಕಾಲಬೇಲಿಯಾ, ಭವಯಿ ನೃತ್ಯ, ಕರ್ನಾಟಕದ ಡೊಳ್ಳು ಕುಣಿತ, ಗುಜರಾತಿನ ಸಿದ್ದಿ ಘಮಾಲ ನೃತ್ಯ, ಛತ್ತೀಸಗಡದ ಪಂತಿ ನೃತ್ಯ, ಓರಿಸ್ಸಾದ ನೃತ್ಯ ಪ್ರದರ್ಶನ ಗಮನಸೆಳೆದವು. ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಪ್ರೊ. ಚಂದ್ರಶೇಖರ ವಸ್ತ್ರದ ಇವರಿಂದ ದೇಶಿ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಎಸ್.ವಿ. ಬಿದರೂರ, ಮಹಾರಾಷ್ಟ್ರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಯೋಜನಾಧಿಕಾರಿ ಗೋಪಾಲ್ ಬೇತಾವರ ಸೇರಿದಂತೆ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಬಿ. ಸಂಕಣ್ಣವರ, ಅನಿಲ್ ಮೆಣಸಿನಕಾಯಿ ಇತರೆ ಗಣ್ಯರು ಆಸೀನರಾಗಿದ್ದರು.ನಗರದ ಪಂ.ಪಂಚಾಕ್ಷರ ಗವಾಯಿ ಸಂಗೀತ ಮಹಾವಿದ್ಯಾಲಯದ ಪ್ರಾಧ್ಯಾಪಕ ಶರಣಬಸಯ್ಯ ಗಡ್ಡದಮಠ ಅವರಿಂದ ವಚನ ಸಂಗೀತ ನಡೆಯಿತು. ಬಸವರಾಜ ವೆಂಕಟಾಪುರ, ಹರ್ಷ ಶಿರೂರ ಇವರಿಂದ ಧರ್ಮಗ್ರಂಥ ಪಠಣ -ಚಿಂತನ ನಡೆದವು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಪ್ರೊ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಉಪಾಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಅನ್ನಕ್ಕ ಬಡಿಗಣ್ಣವರ, ವೀರೇಶ ಮುನವಳ್ಳಿ, ಖಜಾಂಚಿ ಸಿದ್ದಲಿಂಗಯ್ಯ ಹಿರೇಮಠ ಮುಂತಾದವರು ಹಾಜರಿದ್ದರು.