ಸಾಧನೆಗೆ ಪರಿಶ್ರಮ ಅವಶ್ಯ: ದುರ್ಗಾದಾಸ್
ಹೊಳೆಆಲೂರ: ಗುರುವಿಲ್ಲದ, ಗುರಿಯಿರದ ಬದುಕಿಗೆ ಅರ್ಥವಿಲ್ಲ. ಪರಿಶ್ರಮದಿಂದ ಸಾಧನೆ ಸಾಧ್ಯ ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ಕೆ.ಆರ್. ದುರ್ಗಾದಾಸ್ ಹೇಳಿದರು.
ಈಚೆಗೆ ಅವರು ಸ್ಥಳೀಯ ಕಲ್ಮೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ರಜತ ಮಹೋತ್ಸವ ಭವನದಲ್ಲಿ ನಡೆದ ಪಠ್ಯೇತರ ಚಟುವಟಿಕೆ ಸಮಾರೋಪ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಛಲವಿರಬೇಕು. ಗುರಿ ಹೊಂದಿ, ಶ್ರದ್ಧೆಯಿಂದ ಸತತ ಪರಿಶ್ರಮಪಟ್ಟರೆ ಆಟೋಟ, ಪಾಠಗಳಲ್ಲಿ, ಸಂಗೀತ, ಲಲಿತ ಕಲೆ ಹಲವು ರಂಗಗಳಲ್ಲಿ ಯಶಸ್ಸು ಸಾಧ್ಯ. ಶ್ರಮವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು. ಕವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ. ಪ್ರತಾಪಸಿಂಗ್ ತಿವಾರಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಚನ್ನಪ್ಪ ಬೀರನೂರ ವಹಿಸಿದ್ದರು. ಕವಿವಿ ಧಾರವಾಡದ ವಿವಿಧ ಕ್ರೀಡಾ ತಂಡಗಳಿಗೆ, ಬ್ಲ್ಯೂಆಗಿ ಆಯ್ಕೆಯಾದ ಮಹಾವಿದ್ಯಾಲಯದ ದೇವೇಂದ್ರ ಯರಗುದರಿ, ಶಿವು ತಿಪ್ಪಣ್ಣವರ, ಪುಂಡಲಿಕ ಕಲ್ಮನಿ, ಮಹೇಶ ತಿಮ್ಮಾಪುರ (ಕಬಡ್ಡಿ), ಯೋಗಾಸನದಲ್ಲಿ ಸಂಗಮೇಶ ಸಣ್ಣತಮ್ಮಣ್ಣವರ, ಅಥ್ಲೆಟಿಕ್ದಲ್ಲಿ ತಿರುಪತಿ ಧನವಾಡೆ, ಕುಸ್ತಿಯಲ್ಲಿ ಸಂದೀಪ ಖಾಟೆ ಅವರನ್ನು ಮಹಾವಿದ್ಯಾಲಯದಿಂದ ಸನ್ಮಾನಿಸಲಾಯಿತು. ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ, ಡಿ.ಎಸ್. ಶೆಲ್ಲಿಕೇರಿ, ಎಂ.ಬಿ. ಕೋಳೇರಿ, ಎಂ.ಸಿ. ಬ್ಯಾಡಗಿ, ಎಂ.ಎನ್. ತೇಜಿಗೌಡ್ರ, ಡಿ.ಎಂ. ಬಳಿಗೇರ, ಶೃತಿ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಶಿಲ್ಪಾ ಕೆರೂರ ಪ್ರಾರ್ಥಿಸಿದರು. ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಸ್ವಾಗತಿಸಿದರು. ಪ್ರೊ. ಎಸ್.ಎಸ್. ಹುರಕಡ್ಲಿ ನಿರೂಪಿಸಿದರು. ಆನಂದ ಪಟ್ಟಣಶೆಟ್ಟಿ ವಂದಿಸಿದರು.