ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಒತ್ತಡರಹಿತ ಜೀವನಕ್ರಮ ಅಳವಡಿಸಿಕೊಳ್ಳಿ: ವೀರಣ್ಣ

Vishwanath S
Updated On : 9 Apr 2013, 10:45 am

ಕನ್ನಡಪ್ರಭ ವಾರ್ತೆ, ಗದಗ, ಏ. 8
ಮನುಷ್ಯ ತನ್ನ ದೈನಂದಿನ ಒತ್ತಡದ ಬದುಕಿನಿಂದಾಗಿ ಒಂದಿಲ್ಲೊಂದು ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇದರಿಂದ ಹೊರಬಂದು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಉತ್ತಮ ಜೀವನಕ್ರಮ ಅಳವಡಿಸಿಕೊಳ್ಳಬೇಕೆಂದು ಜಿಪಂ ಸಿಇಓ ವೀರಣ್ಣ ತುರಮರಿ ಹೇಳಿದರು.
ಅವರು ಸೋಮವಾರ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಜಿಪಂ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ ಘೋಷಣೆಯಡಿ ಗದಗ ಸಮೀಪ ಮಲ್ಲಸಮುದ್ರದ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕ ರಕ್ತದೊತ್ತಡ ಯಾವುದೇ ಸೂಚನೆಯನ್ನು ನೀಡದೇ ಮೂಕ ಕೊಲೆಗಾರನಂತೆ ಭಯಾನಕವಾಗಿ ಗೋಚರಿಸುತ್ತಿದೆ. ಪ್ರಾಥಮಿಕ ಹಂತದಲ್ಲೇ ರಕ್ತದೊತ್ತಡವನ್ನು ಸೂಕ್ತ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಿಸಬಹುದಾಗಿದೆ. ದಿನ ನಿತ್ಯದ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸುವಂತೆ ಸಲಹೆ ನೀಡಿದ ಅವರು, ಕೊಬ್ಬಿನಾಂಶ ಮತ್ತು ಉಪ್ಪನ್ನು ಮಿತವಾಗಿ ಬಳಸುವಂತೆ ಸೂಚಿಸಿದರು. ತಂಬಾಕು, ಮದ್ಯ ಸೇವನೆಯಂತಹ ವ್ಯಸನಗಳಿಂದ ದೂರವಿರುವಂತೆ ತಿಳಿಸಿದರು, ದೇಹದ ತೂಕ ನಿಯಂತ್ರಿಸಿಕೊಳ್ಳುವುದರ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಸೂಕ್ತ ಎಂದರು.
ಆರೋಗ್ಯ ಸೇವೆಗಿಂತ ಪವಿತ್ರ ಸೇವೆ ಮತ್ತೊಂದಿಲ್ಲ. ಪ್ರತಿ ರೋಗಿಯ ಯೋಗಕ್ಷೇವು ವಿಚಾರಿಸಿಕೊಳ್ಳುವ ಮತ್ತು ಅವರನ್ನು ಗುಣಮುಖರನ್ನಾಗಿಸುವ ಅವಕಾಶ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾತ್ರ ದೊರೆತಿರುವುದು ಸಂತಸದ ಸಂಗತಿ. ಎಲ್ಲರೂ ತಮ್ಮ ವೈಯಕ್ತಿಕ ಆರೋಗ್ಯದ ಕಡೆಗೆ ಲಕ್ಷ್ಯವಹಿಸುವಂತೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಬಿ. ಚೆನ್ನಶೆಟ್ಟಿ ಮಾತನಾಡಿ, ಒತ್ತಡದ ಬದುಕಿನ ಜತೆಗೆ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ಅನೇಕ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಸನಾತನ ಸಂಸ್ಕೃತಿ-ಸಂಸ್ಕಾರಗಳಿಂದ ವಿಮುಖರಾಗುತ್ತಿರುವುದು ವಿಷಾಧದ ಸಂಗತಿ ಎಂದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಆರ್.ಎನ್. ಪಾಟೀಲ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ವೈ.ಕೆ. ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಫ್.ಎಂ. ಸಾಲಿಗೌಡರ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಆರುಂಧತಿ ಕೆ, ಗಾಯಿತ್ರಿದೇವಿ ಮುಂತಾದವರು ಹಾಜರಿದ್ದರು. ಹಿರಿಯ ಆರೋಗ್ಯ ಸಹಾಯಕ ಆರ್.ವಿ. ಕುಪಸ್ತ ಸ್ವಾಗತಿಸಿದರು. ಬಿ.ಎನ್. ಮಸರಕಲ್ಲ ನಿರೂಪಿಸಿದರು. ಬಿ.ಬಿ. ಲಾಳಗಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement