ಜೆಡಿಎಸ್ ಸೇರುವವರಿಗೆ ಸ್ವಾಗತ: ಹಾವಿನಾಳ
ಮುಂಡರಗಿ: ಜೆಡಿಎಸ್ ರೈತರ ಪರವಾದಂತಹ ಪಕ್ಷ. ಈ ಪಕ್ಷದ ತತ್ವ, ಸಿದ್ಧಾಂತ ಮೆಚ್ಚಿ, ಬೇರೆ ಬೇರೆ ಪಕ್ಷದಿಂದ ಅನೇಕರು ಬರುತ್ತಿದ್ದಾರೆ. ಅಂತವರಿಗೆ ಜೆಡಿಎಸ್ನಲ್ಲಿ ಸ್ವಾಗತವಿದೆ ಎಂದು ರೋಣ ಮತಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಹೇಳಿದರು. ಈಚೆಗೆ ಅವರು ಪಟ್ಟಣದಲ್ಲಿ ತಮ್ಮ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬೇರೆ ಪಕ್ಷದಿಂದ ಜೆಡಿಎಸ್ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷದ ಬಾವುಟ ನೀಡುವ ಮೂಲಕ ಬರಮಾಡಿಕೊಂಡು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಮಾಡಿದ ಸಹಾಯ, ಸಹಕಾರ ಜನತೆ ಮರೆತಿಲ್ಲ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಈಗಾಗಲೇ ಹೇಳಿರುವ ಕುಮಾರಸ್ವಾಮಿಯವರ ಕೈ ಬಲಪಡಿಸೋಣ ಎಂದರು. ಈ ಸಂದರ್ಭದಲ್ಲಿ ಹಳ್ಳಿಗುಡಿ, ಹಿರೇವಡ್ಡಟ್ಟಿ, ಹರ್ಲಾಪುರ, ನರೇಗಲ್ ಮುಂತಾದ ಗ್ರಾಮಗಳ ಅನೇಕರು ಜೆಡಿಎಸ್ ಸೇರಿದರು. ಹಿರಿಯ ಮುಖಂಡ ಬಿ.ಎಸ್. ಹಿರೇಗೌಡ್ರ, ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಕಂಬಳಿ, ತಾಲೂಕು ಅಧ್ಯಕ್ಷ ಎಂ.ಜಿ. ವಡ್ಡಟ್ಟಿ, ಉಮೇಶ ಹಿರೇಗೌಡ್ರ, ಡಿ.ಎಂ. ಕಾತರಕಿ, ಜನಾರ್ದನ ಪಾಟೀಲ, ದೇವೇಂದ್ರಪ್ಪ ಬೂದಿಹಾಳ, ರಾಜು ಪೂಜಾರ, ಸುನೀಲ ಕಳ್ಳಳ್ಳಿ ಮುಂತಾದವರು ಉಪಸ್ಥಿತರಿದ್ದರು.