ಟ್ಯಾಕ್ಸಿ ಮಾಲೀಕರಿಂದಅರವಟಿಗೆ ಆರಂಭ
ಮುಂಡರಗಿ: ಪಟ್ಟಣದಲ್ಲಿ ಬಿಸಿಲಿನ ಬೇಗೆಯಿಂದ ಬಾಯಾರಿದ ಜನತೆಯ ದಾಹ ತಣಿಸಲು ಮುಂಡರಗಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಹೊಸ ಬಸ್ ನಿಲ್ದಾಣದ ಹತ್ತಿರ ಕುಡಿಯುವ ನೀರಿನ ಅರವಟಿಗೆ ಆರಂಭಿಸಲಾಗಿದೆ. ರಾಜ್ಯಾದ್ಯಂತ ಚುನಾವಣೆ ಕಾವು ಏರುತ್ತಿದ್ದರೆ, ಮುಂಡರಗಿ ತಾಲೂಕಿನಲ್ಲಿ ಬಿಸಿಲಿನ ಪ್ರತಾಪ ಹೆಚ್ಚುತ್ತಿದೆ. ಉರಿ ಬಿಸಿಲಿನಿಂದ ಜನತೆ ತತ್ತರಿಸಿದ್ದಾರೆ. ಈ ಹಿಂದೆ ಬೇಸಿಗೆ ಬಂತೆಂದರೆ ಮುಂಡರಗಿ ಪಟ್ಟಣದಲ್ಲಿ ಸಂಘ-ಸಂಸ್ಥೆಗಳು, ದೊಡ್ಡ ವ್ಯಾಪಾರಸ್ಥರು ಹಾಗೂ ಪುರಸಭೆಯವರು ಅಲ್ಲಲ್ಲಿ ಕುಡಿಯುವ ನೀರಿನ ಅರವಟಿಗೆ ಆರಂಭಿಸುತ್ತಿದ್ದರು. ಈ ಬಾರಿ ಎಲ್ಲೂ ಅಂಥ ಪ್ರಯತ್ನ ನಡೆದಿರಲಿಲ್ಲ. ಇದರಿಂದಾಗಿ ಕುಡಿಯುವ ನೀರಿಗಾಗಿ ಜನತೆ ಪರದಾಡುವಂತಾಗಿತ್ತು. ಈ ಬಗ್ಗೆ ಕನ್ನಡಪ್ರಭ ಸೋಮವಾರ ವರದಿ ಪ್ರಕಟಿಸಿತ್ತು. ವರದಿ ಪ್ರಕಟಿಸಿದ್ದು ಸ್ವಾಗತಾರ್ಹ. ಗ್ರಾಮೀಣ ಪ್ರದೇಶದಿಂದ ಬರುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕುಡಿವ ನೀರಿನ ಅರವಟಿಗೆಯನ್ನು ಪ್ರಾರಂಭಿಸಿರುವುದಾಗಿ ವೀರೇಶ ಇನಾಮದಾರ್, ಲಿಂಗರಾಜ, ರಾಜಶೇಖರ, ರವಿ, ಮಹಾಂತೇಶ, ಮೆಹಬೂಬ ತಪ್ಪಡಿ ತಿಳಿಸಿದ್ದಾರೆ. ಈ ಉಪಕ್ರಮ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.