ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೋಣದಲ್ಲಿ ಮತದಾನ ಜಾಗೃತಿ ಜಾಥಾ

Vishwanath S
Updated On : 9 Apr 2013, 10:43 am

ಕನ್ನಡಪ್ರಭ ವಾರ್ತೆ, ರೋಣ, ಏ. 8
ಮತದಾರರ ಕಡ್ಡಾಯ ನೋಂದಣಿ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಅರ್ಹ ಮತದಾರರೆಲ್ಲರೂ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲು ಸ್ವೀಪ್ ಎಂಬ ವಿಶಿಷ್ಟವಾದ ಕಾರ್ಯಕ್ರಮದ (ಸಮಿತಿ) ಮೂಲಕ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ಸೂಚನೆಯಂತೆ ತಾಲೂಕು ಆಡಳಿತ ಮತ್ತು ವಿವಿಧ ಇಲಾಖೆಯ ವತಿಯಿಂದ ಸೋಮವಾರ ಪಟ್ಟದ ಶಿವಾನಂದ ಮಠದಿಂದ ತಹಸೀಲ್ದಾರ್ ಕಚೇರಿವರೆಗೆ ಸೋಮವಾರ ಮೆರವಣಿಗೆ ಮೂಲಕ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ವಿವಿಧ ಶಾಲಾ ಮಕ್ಕಳು, ಕಾರ್ಯಕರ್ತರು ಮತ್ತು ಸಹಾಯಕಿಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಚುನಾವಣಾ ಆಯೋಗದ ನಿರ್ದೇಶನದಂತೆ ರಚಿತವಾಗಿರುವ ಸ್ವೀಪ್ (ಸಿಸ್ಟ್‌ಮೆಟಿಕ್ ವೋಟರ್ ಎಜ್ಯುಕೇಶನ್ ಆ್ಯಂಡ್ ಇಲೆಕ್ಟ್ರೋಲ್ ಪಾರ್ಟಿಸಿಪೆಶನ್) ಸಮಿತಿಯು ತಾಲೂಕಿನಾದ್ಯಂತ ಸಂಚರಿಸಿ ಬೀದಿನಾಟಕ, ಚಲನಚಿತ್ರ ಪ್ರದರ್ಶನ, ಕರಪತ್ರ ವಿತರಣೆ, ಜಾಗೃತಿ ಜಾಥಾ ಒಳಗೊಂಡಂತೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಆಂದೋಲನ ಕೈಗೊಂಡಿದೆ. ಸಮಿತಿಯು ವಿಶೇಷವಾಗಿ ಯುವ ಮತದಾರರ ನೋಂದಣಿಗಾಗಿ 18 ವರ್ಷ ತುಂಬಿದ ಎಲ್ಲ ಯುವಕ-ಯುವತಿಯರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರಗೊಳಿಸುವುದು ಕುರಿತು ಅರಿವು ನೀಡಲಿದೆ ಎಂದು ತಹಸೀಲ್ದಾರ್ ಎಸ್.ಆರ್. ಕಡಿವಾಲ ತಿಳಿಸಿದರು.
ಸಮಿತಿಯು ಅನಕ್ಷರಸ್ಥರ ಬಡಾವಣೆ, ಕೊಳಚೆ ಪ್ರದೇಶ, ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಬಡಾವಣೆಗಳಲ್ಲಿ ಬೀದಿ ನಾಟಕ, ಜಾಗೃತಿ ಜಾಥಾ, ಜಾನಪದ, ಮಾಧ್ಯಮ ಹಾಗೂ
ಎನ್‌ಎಸ್‌ಎಸ್ ಇವುಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಯುವ ಮತದಾರರ ಕಡ್ಡಾಯ ಮತದಾನ ಕುರಿತು ಅರಿವು ಮೂಡಿಸಲಿದೆ. ಸ್ತ್ರೀ ಶಕ್ತಿ ಸಂಘಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದಲ್ಲಿ ಕರಪತ್ರಗಳನ್ನು ವಿತರಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಂ. ರುದ್ರಸ್ವಾಮಿ ತಿಳಿಸಿದರು. ಮತದಾನ ಜಾಗೃತಿ ಜಾಥಾದಲ್ಲಿ ತಾಲೂಕ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಕೆಂಪ ಹನುಮಯ್ಯ, ಪಶು ವೈದ್ಯಾಧಿಕಾರಿ ಡಾ. ಹುಲಗಣ್ಣವರ, ನೀರಾವರಿ ಇಲಾಖೆ ಎಇಇ ಎಸ್.ಎಸ್. ಪಾಳೆಗಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಹಿರೇಕುರುಬರ, ಬಿಸಿಎಂ ಇಲಾಖೆ ಅಧಿಕಾರಿ ಇಟೇಕಾರ, ಕೆಂಚನಗೌಡ, ಶಿಕ್ಷಕಿ ತೇಜಶ್ವಿನಿ ಕುಷ್ಟಗಿ, ಅಂಗನವಾಡಿ ಮೇಲ್ವಿಚಾರಕಿಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement