ಸಂಘಗಳು ಸೇವಾ ಮನೋಭಾವ ಹೊಂದಲಿ: ಚಿಕ್ಕಮಣ್ಣೂರ
ಹೊಳೆಆಲೂರ: ಸಂಘಗಳನ್ನು ಆರಂಭಿಸಿದರೆ ಸಾಲದು. ಅವುಗಳ ಉದ್ದೇಶ, ಗುರಿಗಳು ಉನ್ನತವಾಗಿಟ್ಟುಕೊಂಡು ದೀನ ದಲಿತರ, ಅಸಾಯಕರ ಸಾಮಾಜಿಕ ಸೇವೆಯನ್ನು ಮಾಡುವಂತಹ ಮನೋಭಾವ ಹೊಂದಿರಬೇಕು ಎಂದು ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫಕ್ರುಸಾಬ್ ಚಿಕ್ಕಮಣ್ಣೂರ ಹೇಳಿದರು.
ಅವರು ಭಾನುವಾರ ಹೊಳೆಆಲೂರಿನ ಖೂಬಾ ಮಸ್ಜಿದ್ ಆವರಣದಲ್ಲಿ ಉಚಿತ ಖತ್ನಾ ಶಿಬಿರ, ಖಿದ್ಮತ್-ಎ-ಖಲ್ಕ್ ನೌಜವಾನ್ ಕಮಿಟಿ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಮುಸ್ಲಿಂ ಬಾಂಧವರು ಹೆಚ್ಚಾಗಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದು, ಬೆಲೆ ಏರಿಕೆಯ ಬಿಸಿಯಲ್ಲಿ ತತ್ತರಿಸುತ್ತಿದ್ದಾರೆ. ಅಂತವರು ತಮ್ಮ ಮಕ್ಕಳ ಖತ್ನಾ ಮಾಡಿಸಬೇಕೆಂದರೆ ಕಷ್ಟದ ಕಾರ್ಯ. ಇಂಥಹ ಸ್ಥಿತಿಯಲ್ಲಿ ಅವರ ಭಾರ ಕಡಿಮೆ ಮಾಡಲು ಕಮಿಟಿವರು ಉದ್ಘಾಟನಾ ಸವಿನೆನಪಿಗೆ ಈ ಕಾರ್ಯ ಕೈಗೊಂಡಿದ್ದಾರೆ ಎಂದರು.
ಸಂಘದ ಅಧ್ಯಕ್ಷ ನಾಸೀರ ಅಹ್ಮದ ಅನಸರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಪ್ರಭಾರ ಅಧ್ಯಕ್ಷ ಜಗದೀಶ ಬ್ಯಾಡಗಿ, ಡಾ. ಸಂತೋಷ ಯಾವಗಲ್, ಮಕ್ತುಂಸಾಬ ಚಿಕ್ಕಮಣ್ಣೂರ, ಮಲ್ಲಣ್ಣ ಕೋಳೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ, ಡಿ.ಎಸ್. ಶೆಲ್ಲಿಕೇರಿ, ಎಂ. ಮಲ್ಲಪ್ಪ ಸಜ್ಜನರ, ಬಸವರಾಜ ಖವಾಸ್ತ, ಮಹಾಂತೇಶ ಬ್ಯಾಡಗಿ, ಶ್ರೀಶೈಲಪ್ಪ ಕಾತರಕಿ, ಬಸನಗೌಡ ಶಿರಗುಂಪಿ, ಬಿ.ಬಿ. ಬೀರನೂರ, ಎಂ.ಡಿ. ನೀರಲಗಿ, ಎ.ಕೆ. ಮನ್ನಾಪುರ, ಮಹ್ಮದ ಶಿರಹಟ್ಟಿ ಆಗಮಿಸಿದ್ದರು.
ಗದಗ-ಬೆಟಗೇರಿ ನಗರಸಭೆ ಸದಸ್ಯ ಪೀರಸಾಬ್ ಕೌತಾಳ, ರೋಣ ಪುರಸಭೆ ಸದಸ್ಯ ಶಫೀಕ ಅಹ್ಮದ ಮೂಗನೂರ, ಹಜ್‌ಯಾತ್ರೆ ಮುಗಿಸಿ ಬಂದ ಹಾಜಿ ಮೌಲಾಸಾಬ್ ಅಂಗಡಿಗೇರ ಅವರನ್ನು ಸನ್ಮಾನಿಸಲಾಯಿತು. ಖತ್ನಾ ಕಾರ್ಯಕ್ರಮದಲ್ಲಿ 75 ಮಕ್ಕಳಿಗೆ ಖತ್ನಾ ನೆರವೇರಿಸಿ, ಉಚಿತ ಔಷಧ ವಿತರಣೆ ಮಾಡಲಾಯಿತು. ಮೆಹಬೂಬ ಹುಂಡೇಕಾರ ಸ್ವಾಗತಿಸಿದರು. ಮಕ್ತುಂಸಾಬ ಚಿಕ್ಕಮಣ್ಣೂರ ವಂದಿಸಿದರು.