ಸಿ.ಸಿ. ಪಾಟೀಲ್ ಆಸ್ಪತ್ರೆಯಲ್ಲಿ ಕಾರ್ಯಕರ್ತರು ಪ್ರಚಾರದಲ್ಲಿ
ಗದಗ: ನರಗುಂದ ಶಾಸಕ ಸಿ.ಸಿ. ಪಾಟೀಲ್ ಈಚೆಗೆ ಗುಂಡೇಟಿನಿಂದ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ವರ್ಷಗಳಿಂದ ಉತ್ತಮ ಕಾರ್ಯಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಲ್ಲಿ ಅವರ ಬಗ್ಗೆ ಒಳ್ಳೆಯ ಮಾತು ಕೇಳಿ ಬರುತ್ತಿವೆ. ಪಾಟೀಲರು ಆಸ್ಪತ್ರೆಯಲ್ಲಿದ್ದರೂ ಅವರ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ಮಾ. 17 ರಂದು ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಉಂಟಾದ ಗಲಾಟೆಯಲ್ಲಿ ಅವರ ಗನ್ಮ್ಯಾನ್ ಅಚಾತುರ್ಯದಿಂದ ಸಿ.ಸಿ. ಪಾಟೀಲರಿಗೆ ಗುಂಡೇಟಿನಂದ ಕರುಳಿನ ಭಾಗಕ್ಕೆ ತೊಂದರೆಯಾಗಿದ್ದು, ತಕ್ಷಣವೇ ಅವರನ್ನು ಹುಬ್ಬಳ್ಳಿಯ ಲೈಫ್ಲೈನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ನಂತರ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿದ್ದಾರೆ.
ಕಾರ್ಯಕರ್ತರಿಂದ ಪ್ರಚಾರ ಕಾರ್ಯ: ಪಾಟೀಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನರಗುಂದ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರು, ಸಿ.ಸಿ. ಪಾಟೀಲ ಅಭಿಮಾನಿ ಬಳಗದ ನೇತೃತ್ವದಲ್ಲಿ ಹಲವು ದಿನಗಳಿಂದ ಅವರ ಪರ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ಈಗಾಗಲೆ ಹೊಂಬಳ, ಶ್ಯಾಗೋಟಿ, ದುಂದೂರು, ಯಾವಗಲ್ಲ, ಬೆಳವಣಕಿ ಸೇರಿದಂತೆ ನರಗುಂದ, ರೋಣ, ಗದಗ ತಾಲೂಕಿನ, ನರಗುಂದ ವಿಧಾನಸಭಾ ಮತಕ್ಷೇತ್ರಕ್ಕೊಳಪಡುವ ಹಲವು ಗ್ರಾಮಗಳಲ್ಲಿನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಆರೋಗ್ಯಕ್ಕಾಗಿ ವಿಶೇಷ ಪೂಜೆ: ಕೆಲವರು ಅವರು ಶೀಘ್ರ ಗುಣಮುಖರಾಗಿ ಬರಲೆಂದು ದೇವರಿಗೆ ವಿಶೇಷ ಪೂಜೆ, ಉರುಳು ಸೇವೆ, ಇಟಗಿ ಭೀಮಾಂಬಿಕಾ ದೇವರಿಗೆ ಕಾಯಿ ಕಟ್ಟುವುದು, ಹಲವು ದೇವರಿಗೆ ಉಡಿ ತುಂಬುವ ಕಾರ್ಯ ಕೈಗೊಂಡಿದ್ದಾರೆ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿಯೇ ಗೆಲುವಿನ ಗದ್ದುಗೆ ಹಿಡಿಯುವವರ ಹೆಸರಲ್ಲಿ ಪ್ರಮುಖ ಸ್ಥಾನದಲ್ಲಿರುವ ಸಿ.ಸಿ. ಪಾಟೀಲರು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಕಾರ್ಯದಲ್ಲಿ ನಿರತರಾಗಿದ್ದಾರೆ.
ನರಗುಂದ ಭಾಗದಲ್ಲಿ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ, ಇಲ್ಲಿ ನೀರಿನ ಬವಣೆ ಮಾತ್ರ ಹೇಳ ತೀರದಂತಾಗಿದೆ. ಹಲವು ಕಡೆಗಳಲ್ಲಿ ಬೋರ್ವೆಲ್ ಹಾಕಿಸಿದರೂ ಹನಿ ನೀರು ಬಾರದನ್ನು ಗಮನಿಸಿದ ಪಾಟೀಲ್ ನರಗುಂದ ಭಾಗದಲ್ಲಿನ ಎಲ್ಲ ಕೆರೆಗಳಿಗೆ ಮಲಪ್ರಭಾ ಜಲಾಶಯದಿಂದ ನೀರನ್ನು ಹರಿಸುವ ಮೂಲಕ ಕ್ಷೇತ್ರದಲ್ಲಿನ ಜನರ ನೀರಿನ ಬವಣೆ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಇದೇ ರೀತಿ ಹಲವು ಅಭಿವೃದ್ಧಿ ಕಾರ್ಯಗಳಿಂದ ಜನರ ಹಾಗೂ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರ ಜನಪರ ಕಾರ್ಯಗಳಿಂದಾಗಿಯೇ ಕ್ಷೇತ್ರದ ಸಾರ್ವಜನಿಕರು, ಕಾರ್ಯಕರ್ತರು, ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಲವಾರು ಸೌಕರ್ಯ ನೀಡಿ ತಮ್ಮ ಪರ ಪ್ರಚಾರಕ್ಕೆ ಬರುವಂತೆ ಕೋರಿದರೂ ಬರದೇ ಇರುವ ಜನರಿರುವ ಈ ದಿನಗಳಲ್ಲಿ, ತಮ್ಮ ನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರವಾಗಿ ನೂರಾರು ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುತ್ತಿರುವುದು ಇತರೇ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿದೆ.
-ಅಜೀಜಅಹ್ಮದ ಬಳಗಾನೂರ