ಗಜೇಂದ್ರಗಡ: ಪಟ್ಟಿಯಲ್ಲಿ ಅನರ್ಹರ ಹೆಸರು ಸೇರ್ಪಡೆ ಖಂಡಿಸಿ ಪ್ರತಿಭಟನೆ
ಗಜೇಂದ್ರಗಡ: ಮತದಾರ ಪಟ್ಟಿಯಲ್ಲಿ 14 ರಿಂದ 17 ವಯಸ್ಸಿನ ಅಪ್ರಾಪ್ತರ ಹೆಸರು ಸೇರಿಸುವ ಮೂಲಕ ಅಧಿಕಾರಿಗಳು ಪ್ರಜಾಪ್ರಭುತ್ವ ಕಗ್ಗೊಲೆಗೆ ಮುಂದಾಗಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ದಾಖಲೆಗಳ ಸಮೇತ ಖಾಸಗಿ ಡಾಟಾ ಎಂಟ್ರಿ ಸೆಂಟರ್ ಮುಂದೆ ಪ್ರತಿಭಟನೆ ನಡೆಸಿದರು.
ಗಜೇಂದ್ರಗಡ ಸುತ್ತಲಿನ ಹಾಗೂ ಸ್ಥಳೀಯ ಎಲ್ಲ 23 ವಾರ್ಡ್ಗಳಲ್ಲಿ ವಾಸವಿಲ್ಲದವರನ್ನು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು, ಬಸ್ ನಿಲ್ದಾಣ ಬಳಿ ಇರುವ ಖಾಸಗಿ ಡಾಟಾ ಇಂಟರ್ನೆಟ್ ಸೆಂಟರ್ನಲ್ಲಿ ಹೊಸದಾಗಿ ಮತದಾರರ ಸೇರ್ಪಡೆಗೊಳಿಸಲು ರೋಣ ತಹಸೀಲ್ದಾರ್ ಸ್ಥಳೀಯ ಪುರಸಭೆ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಿದ್ದರು. ಮಂಗಳವಾರ ರಾತ್ರಿ ರೋಣದ ಕಂಪ್ಯೂಟರ್ ಸೆಂಟರ್ವೂಂದರಲ್ಲಿ ಅಕ್ರಮವಾಗಿ ಮತದಾರರ ಸೇರ್ಪಡೆ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದನ್ನು ಅರಿತ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಟ್ಟಣದ ಖಾಸಗಿ ಡಾಟಾ ಇಂಟರನೆಟ್ ಸೆಂಟರ್ಗೆ ದಿಢೀರನೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಅಪ್ರಾಪ್ತ ವಯಸ್ಕರನ್ನು ಸೇರ್ಪಡೆ ಗೊಳಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧಾಖಲೆ ಸಮೇತ ಹಿಡಿದು, ಆಕ್ರೋಶ ವ್ಯಕ್ತಪಡಿಸಿದರು. ಡಾಟಾ ಎಂಟ್ರಿ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡರು. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲ ಸೇರ್ಪಡೆಯನ್ನು ಪುರಸಭೆ ಸಿಬ್ಬಂದಿಯವರು ಎಂಟ್ರಿ ಮಾಡುತ್ತಿದ್ದಾರೆ. ಮುಖ್ಯಾಧಿಕಾರಿಯವರನ್ನು ಸಂಪರ್ಕಿಸಿ ಎಂದರು. ತಕ್ಷಣ ಮುಖ್ಯಾಧಿಕಾರಿ ಎಂ.ಎಚ್. ಬಿಳಗಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಸ್ಥಳಕ್ಕೆ ದೌಡಾಯಿಸಿದ ಮುಖ್ಯಾಧಿಕಾರಿ ಎಂ.ಎಚ್. ಬಿಳಗಿಗೆ ಅಪ್ರಾಪ್ತ ವಯಸ್ಸಿನ ಸೇರ್ಪಡೆಯ ಆದೇಶ ಪತ್ರವನ್ನು ತೋರಿಸಿ ಕಾಂಗ್ರೆಸ್ ಮುಖಂಡರು ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಎಲ್ಲ ದಾಖಲೆಗಳನ್ನು ಪುರಸಭೆ ಕಾರ್ಯಾಲಯಕ್ಕೆ ತೆಗೆದುಕೊಂಡು ಹೊಗಲು ಪಟ್ಟುಹಿಡಿದರು. ಅರ್ಜಿಗಳನ್ನು ಡಾಟಾ ಎಂಟ್ರಿ ಮಾಡಲು ತಹಸೀಲ್ದಾರ್ ನೀಡಿದ್ದಾರೆ. ನಾನು ಕೊಟ್ಟಿರುವುದಿಲ್ಲಾ ಎಂದು ಮುಖ್ಯಾಧಿಕಾರಿ ಹೇಳಿದರು. ಪ್ರತಿಭಟನಾಕಾರರು ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಲೇಬೇಕೆಂದು ಪಟ್ಟುಹಿಡಿದು ಕುಳಿತರು.
ಸ್ಥಳಕ್ಕೆ ಸಚಿವ ಕಳಕಪ್ಪ ಬಂಡಿ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಂಪ್ಯೂಟರ್ ಸೆಂಟರ್ ಒಳಗಿದ್ದ ಮತದಾರರ ಅರ್ಜಿಗಳನ್ನು ಹೊರಗೆ ಇಟ್ಟಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಕಾನೂನು ಬಾಹಿರ ಕೃತ್ಯ ಎಸಗಿರುವುದನ್ನು ದಾಖಲೆಗಳ ಸಮೇತ ಸಚಿವರಿಗೆ ವಿವರಣೆ ನೀಡುವ ವೇಳೆ ಕಾಂಗ್ರೆಸ್ ನಾಯಕರು, ಸಚಿವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ರೋಣ ಸಿಪಿಐ ಎಂ.ಎಸ್. ನಾಯ್ಕರ್, ಪಿಎಸ್ಐ ವೀರಾರೆಡ್ಡಿ ವಾತಾವರಣ ತಿಳಿಗೊಳಿಸಲು ಹರ ಸಾಹಸ ಪಟ್ಟರು. ಬಳಿಕ ಆಗಮಿಸಿದ ರೋಣ ತಹಸೀಲ್ದಾರ್ ಎಂ.ಬಿ. ಪಾಟೀಲ ಎಲ್ಲ ಅರ್ಜಿಗಳನ್ನು ಡಾಟಾ ಎಂಟ್ರಿ ಸೆಂಟರ್ನಿಂದ ವಾಹನದಲ್ಲಿ ತೆಗೆದುಕೊಂಡು ನಡೆಯಿರಿ ಎಂದು ಹೇಳಿದರು. ಪ್ರಮಾದದ ಬಗ್ಗೆ ಕಾರ್ಯಕರ್ತರು ತಹಸೀಲ್ದಾರ್ಗೆ ದಾಖಲೆ ಸಮೇತ ವಿವರಿಸಿದರು.
ಕಾಂಗ್ರೆಸ್ ಮುಖಂಡ ಚಂಬಣ್ಣಾ ಚವಡಿ, ಮಿಥುನ್ ಪಾಟೀಲ, ವೀರಣ್ಣಾ ಸೊನ್ನದ್ದ, ಸುಭಾನಸಾಬ ಆರಗಿದ್ದಿ, ಶ್ರೀಕಾಂತ ಅವಧೂತ, ಅಪ್ಪು ಮತ್ತಿಕಟ್ಟಿ, ಶಶಿಧರ ಹೂಗಾರ, ಮುರ್ತುಜಾ ಡಾಲಾಯತ್, ಮಾರುತಿ ಕಲ್ಲೋಡ್ಡರ, ಮೂಕಪ್ಪ ಗುಡೂರ, ಷಣ್ಮುಕಪ್ಪ ನಿಡಗುಂದಿ, ಮೋಹನಸಾ ರಾಯಬಾಗಿ, ಎಫ್.ಎಸ್. ಕರಿದುರಗನವರ, ಪ್ರಶಾಂತ ರಾಠೋಡ, ಶ್ರೀಧರ ಗಂಜಿಗೌಡ್ರ, ಕೊಟ್ರೇಶ ಚಿಲಕಾ, ರವಿ ಗಡೇದವರ, ವೆಂಕಣ್ಣಾ ಸೊನ್ನದ, ವೆಂಕಟೇಶ ಮುದಗಲ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.