ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚುನಾವಣಾಧಿಕಾರಿ, ತಹಸೀಲ್ದಾರ್ ತರಾಟೆಗೆ

Vishwanath S
Updated On : 11 Apr 2013, 12:45 pm

ರೋಣ: ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳುವಲ್ಲಿ 14 ರಿಂದ 16 ವರ್ಷದ ಒಳಗಿನವರ ಹೆಸರುಗಳನ್ನು ಸೇರ್ಪಡೆ ಮಾಡುವ ಗೋಲ್‌ಮಾಲ್ ಪ್ರಕ್ರಿಯೆ ಬಯಲುಗೊಂಡು ಚುನಾವಣೆ ಅಧಿಕಾರಿ ಎನ್.ಆರ್. ಜೋಶಿ ಹಾಗೂ ತಹಸೀಲ್ದಾರ್ ಎಂ.ಬಿ. ಪಾಟೀಲ ಅವರನ್ನು ಕಾರ್ಯಕರ್ತರು ಕೂಡಿ ಹಾಕಿ, ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ತಡ ರಾತ್ರಿ ಪಟ್ಟಣದ ಶಿವಪೇಟೆ ಇ.ಕೆಫೆ. ಕಂಪ್ಯೂಟರ್ ಸೆಂಟರ್‌ನಲ್ಲಿ ನಡೆದಿದೆ.
ಖಾಸಗಿ ಕಂಪ್ಯೂಟರ್ ಸೆಂಟರ್‌ನಲ್ಲಿ ಮತದಾರರ ಸೇರ್ಪಡೆ ಅರ್ಜಿಗಳನ್ನು ಕಂಪ್ಯೂಟರ್‌ನಲ್ಲಿ ಚುನಾವಣೆ ಅಧಿಕಾರಿಗಳು ಸೇರ್ಪಡೆ ಮಾಡಿಕೊಳ್ಳುತ್ತಿರುವ ವಿಚಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾರ್ಯಕರ್ತರು ಕಂಪ್ಯೂಟರ್ ಸೆಂಟರ್‌ನಲ್ಲಿ ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಅಲ್ಲಿ 18 ವರ್ಷ ತುಂಬದವರ ಅರ್ಜಿಗಳಿರುವುದನ್ನು ಕಂಡು, ಹಾಗೂ ಅವರ ಜನ್ಮ ದಿನಾಂಕಗಳನ್ನು ತಿದ್ದುಪಡಿ ಮಾಡಿ ಕಂಪ್ಯೂಟರನಲ್ಲಿ ದಾಖಲಾತಿ ಮಾಡುವ ಮೂಲಕ ಮತದಾನದ ಯಾದಿಯಲ್ಲಿ ತಮಗೆ ಬೇಕಾದವರ ಹೆಸರುಗಳನ್ನು ಸೇರ್ಪಡೆ ಮಾಡಿ, ಬಿಜೆಪಿ ವಿರೋಧಿ ಮತಗಳನ್ನು ರದ್ದುಪಡಿಸುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ರೊಚ್ಚಿಗೆದ್ದ ಕಾರ್ಯಕರ್ತರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕೂಡಿ ಹಾಕುವ ಮೂಲಕ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು. 18 ವರ್ಷ ತುಂಬದವರನ್ನು ಮತದಾರರ ಯಾದಿಯಲ್ಲಿ ಸೇರಿಸುವ ಮೂಲಕ ಭಾರಿ ಗೋಲ್‌ಮಾಲ್ ನಡೆಸುವ ತಂತ್ರಕ್ಕೆ ಅಧಿಕಾರಗಳು ಇಳಿದಿದ್ದು ನಾಚಿಕೆಗೇಡಿನ ಸಂಗತಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಚುನಾವಣೆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಕಂಪ್ಯೂಟರ್ ಸೆಂಟರ್‌ನಲ್ಲಿ ದಿಗ್ಬಂಧನ ವಿಧಿಸುವ ಮೂಲಕ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹಿಸಿದರು. ನಂತರ ಸಿಪಿಐ ಮಲ್ಲನಗೌಡ ನಾಯ್ಕ ಕಾರ್ಯಕರ್ತರನ್ನು ಸಮಾಧಾನ ಪಡಿಸಿ, ಕಂಪ್ಯೂಟರ್ ಸೆಂಟರ್‌ನ್ನು ಸೀಜ್ ಮಾಡುವ ಮೂಲಕ ಬೆಳಗ್ಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement