ಜಾತ್ಯತೀತ ವ್ಯಕ್ತಿಗೆ ಮತ ನೀಡಿ: ಗಡ್ಡದೇವರಮಠ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 10
ಯಾವುದೇ ಜಾತಿಭೇದ ಮಾಡದೆ, ಬಡವ, ಶ್ರೀಮಂತರೆನ್ನದೆ ಎಲ್ಲರೊಂದಿಗೆ ಬೆರೆತುಕೊಳ್ಳುವ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿಯವರಿಗೆ ಜನರು ಮತ ನೀಡಲಿದ್ದಾರೆಂದು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ದೊಡ್ಡಮನಿ ಅವರು ಬಡವರ, ಹಿಂದುಳಿದವರ ಸಮಸ್ಯೆಗೆ ಅನೇಕ ಹೋರಾಟಗಳನ್ನು ಮಾಡುವ ಮೂಲಕ ಜನರಿಗೆ ಸಹಕರಿಸುತ್ತಾ ಬಂದಿದ್ದಾರೆ. ಅವರಿಗೆ ಮತದಾರರು ಆಶೀರ್ವದಿಸಲಿದ್ದಾರೆ. ಶಿರಹಟ್ಟಿ ಕ್ಷೇತ್ರಕ್ಕೆ 21 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಪಕ್ಷದ ಹೈಕಮಾಂಡ್ ರಾಮಕೃಷ್ಣ ದೊಡ್ಡಮನಿಯವರಿಗೆ ಟಿಕೆಟ್ ನೀಡಿದ್ದು, ಉಳಿದೆಲ್ಲ ಆಕಾಂಕ್ಷಿಗಳು ಅವರಿಗೆ ಬೆಂಬಲ ನೀಡುತ್ತಾರೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಮಣ್ಣ ಲಮಾಣಿ (ಶಿಗ್ಲಿ) ಮಾತನಾಡಿ, ನಾನು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದೆ ಆದರೆ ರಾಮಕೃಷ್ಣ ದೊಡ್ಡಮನಿಗೆ ಟಿಕೆಟ್ ದೊರೆತಿದ್ದು, ಯಾವುದೇ ವೈಮನಸ್ಸಿಲ್ಲದೆ ನಾವೆಲ್ಲರೂ ಸೇರಿ ಅವರ ಗೆಲುವಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಬಿ.ಎಸ್. ಮೇಟಿ, ಡಿ.ಸಿ. ಪಾಟೀಲ, ಬಸವರಾಜ ರಾಮೇನಹಳ್ಳಿ, ಅಶೋಕ ಹುಬ್ಬಳ್ಳಿ, ಎಸ್.ಡಿ. ಮಕಾಂದಾರ, ಡಿ.ಡಿ. ಮೋರನಾಳ, ರಾಮಣ್ಣ ಬಳ್ಳಾರಿ, ಪಾಲಾಕ್ಷಿ ಗಣದಿಣ್ಣಿ ಮುಂತಾದವರು ಉಪಸ್ಥಿತರಿದ್ದರು.