ಬಿಜೆಪಿ ಸುಳ್ಳಿಗೆ ಕಿವಿಗೊಡಬೇಡಿ: ಪಾಟೀಲ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 10
ಬಿಜೆಪಿ ನಾಯಕರ ಸುಳ್ಳು ಆಶ್ವಾಸನೆಗೆ ಮಾರುಹೋಗದೆ ಜಾತ್ಯತೀತ ಮನೋಭಾವನೆಯುಳ್ಳ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಸೇವೆಗೆ ಅವಕಾಶ ನೀಡಿ ಎಂದು ರೋಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಹೇಳಿದರು.
ಕುಂಟೋಜಿ ಗ್ರಾಮದ ಶರಣಬಸವೇಶ್ವರ ಕರ್ತೃ ಗದ್ದುಗೆ ಹಾಗೂ ಮ್ಯಾಕಲ್‌ಝರಿ ಗ್ರಾಮದ ಮಾರುತೇಶ್ವರ ದೇಗುಲದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಡೆದ ಬಹಿರಂಗ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಕಾರ್ಯವೈಖರಿ ಜನತೆಗೆ ಬೇಸರ ಮೂಡಿಸಿದೆ. ರೋಣ ಕ್ಷೇತ್ರದ ಶಾಸಕರ ಸರ್ವಾಧಿಕಾರ ಜನತೆಗೆ ವಾಕರಿಕೆ ಮೂಡಿಸಿದೆ. ಗ್ರಾಮೀಣ ಜನರನ್ನು ಕಡೆಗಣಿಸಿರುವ ಬಿಜೆಪಿ ಈ ಬಾರಿ ಸಂಪೂರ್ಣ ನೆಲಕಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೀರಣ್ಣಾ ಶೆಟ್ಟರ್ ಮಾತನಾಡಿ, ರೋಣ ಮತಕ್ಷೇತ್ರ ಅಭಿವೃದ್ಧಿಗಾಗಿ ಹರಿದು ಬಂದಿರುವ ಅನುದಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಕ್ಷೇತ್ರದಲ್ಲಿ ನಡೆಸಿರುವ ಕಳಪೆ ಕಾಮಗಾರಿಗಳೇ ಸಾಕ್ಷಿ ಎಂದರು.
ಮೋಹನಸಾ ರಾಯಬಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣಾ ಸೊನ್ನದ ಮಾತನಾಡಿದರು. ಬಿಜೆಪಿ ತೊರೆದ ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷ ಸೇರಿದರು.
ವೀರಬಸಯ್ಯಾ ಕಾರಡಗಿಮಠ, ಶಿವಶರಣಯ್ಯಾ ಹಿರೇಮಠ, ಶಂಕ್ರಯ್ಯಾ ಕಾರಡಗಿಮಠ, ಮಲ್ಲಯ್ಯಾಜ್ಜ ಕೋಡಿಕೊಪ್ಪಮಠ ಸಾನ್ನಿಧ್ಯ ವಹಿಸಿದ್ದರು. ಚಂಬಣ್ಣಾ ಚವಡಿ, ಸುಭಾನಸಾಬ ಆರಗಿದ್ದಿ, ಪರಶುರಾಮ ಅಳಗವಾಡಿ, ಅಶೋಕ ದೇಶಣ್ಣವರ, ಗಿರೀಶ ರಂಗ್ರೇಜಿ, ವೆಂಕಟೇಶ ಮುದ್ಗಲ್, ದತ್ತುಸಾ ಬಾಕಳೆ, ಪ್ರಶಾಂತ ಶಿರೋಡಕರ್, ದುರ್ಗಪ್ಪ ಬಣ್ಣದ, ಶರಣಯ್ಯಾ ಕುಕನೂರಮಠ, ಮುದಿಯಪ್ಪ ದಿವಾಣದ, ಶರಣಪ್ಪ ಅವಾರಿ, ಮುದಿಯಪ್ಪ ಕರಡಿ, ಪ್ರಭು ಮೇಟಿ, ಅಪ್ಪು ಮತ್ತಿಕಟ್ಟಿ, ಯೂಸೂಫ ಇಟಗಿ, ಪ್ರಶಾಂತ ರಾಠೋಡ, ಮಾರುತಿ ಕಲ್ಲೊಡ್ಡರ, ಎಫ್.ಎಸ್. ಕರಿದುರ್ಗಣ್ಣವರ, ಉಮೇಶ ರಾಠೋಡ, ಕುಮಾರ ರಾಠೋಡ, ತುಳಸಿರಾಮ ಮಾಳೋತ್ತರ ಉಪಸ್ಥಿತರಿದ್ದರು.