ಜಾನುವಾರಿಗೆ ಮೇವಿನ ಕೊರತೆ
ಕನ್ನಡಪ್ರಭ ವಾರ್ತೆ, ನರಗುಂದ, ಏ. 12
ತಾಲೂಕಿನಲ್ಲಿ ಎರಡು ವರ್ಷದಿಂದ ಮಳೆಯಾಗದೇ ಇರುವುದರಿಂದ ರೈತ ಸಮುದಾಯ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ತನ್ನ ಕೃಷಿ ಕಾರ್ಯಕ್ಕೆ ಅವಶ್ಯವಿರುವ ಎತ್ತುಗಳು, ಆಕಳು, ಎಮ್ಮೆಗಳನ್ನು ಸಾಕಲು ಮೇವಿಲ್ಲದೆ ಅನಿವಾರ್ಯವಾಗಿ ಕಟುಕರಿಗೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಬಂದಿತ್ತು. ಹಾಗಾಗಿ ನರಗುಂದ ಭಾಗದ ಎಲ್ಲ ನೀರಾವರಿ ಜಮೀನುಗಳಿಗೆ ನೀರು ದೊರಕಿದ್ದರಿಂದ ಅಲ್ಪ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗಿತ್ತು. ಇದರಿಂದ ರೈತರು ಜಾನುವಾರುಗಳಿಗಾಗಿ ಮೇವು, ಹೊಟ್ಟು ಸಂಗ್ರಹಿಸಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಸಮರ್ಪಕ ಮಳೆಯಾಗದೇ ಇರುವುದರಿಂದ ಬೆಳೆಗಳು ಸಂಪೂರ್ಣ ಒಣಗಿ ಹೋದವು.
ಪರದಾಟ: ಈ ಬಾರಿ ಸಮರ್ಪಕ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರು ಖಾಲಿಯಾಗಿದೆ. ಹಾಗಾಗಿ ರೈತರಿಗೆ ಸರಿಯಾಗಿ ಬೆಳೆ ಬಾರದಿರುವುದರಿಂದ ಸಮರ್ಪಕ ಮೇವಿನ ಸಂಗ್ರಹವಿಲ್ಲ. ಮೇವಿನ ಕೊರತೆಯಿಂದ ತಮ್ಮ ನೆಚ್ಚಿನ ಜಾನುವಾರುಗಳನ್ನು ಸಾಕಲು ಹೆಣಗಾಡುವ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಅಲ್ಪ ಪ್ರಮಾಣದಲ್ಲಿ ಜಲಾಶಯದಿಂದ ನೀರು ಬಿಡುಗಡೆಯಾದರೂ ಮುಖ್ಯ ಕಾಲುವೆ ಪಕ್ಕದಲ್ಲಿರುವ ಒಣ ಬೇಸಾಯ ಜಮೀನುಗಳ ರೈತರು ಪಂಪ್‌ಸೆಟ್‌ಗಳ ಮೂಲಕ ನೀರು ಬಳಸಿಕೊಂಡಿದ್ದರಿಂದ ಕೆಳಭಾಗದ ಕಾಲುವೆಗೆ ನೀರು ಬರುವುದರೊಳಗೆ ಖಾಲಿಯಾಗಿರುತ್ತದೆ. ಹಾಗಾಗಿ ಈ ಕಾಲುವೆ ನೀರನ್ನೇ ನಂಬಿ ಬದುಕುತ್ತಿದ್ದ ರೈತರು ಕಂಗಾಲಾಗಿದ್ದಾರೆ.
ಮೇವು ಖರೀದಿ: ಕೆಲವು ರೈತರು ಈ ಭಾಗದ ಸುತ್ತಮುತ್ತಲಿನ ಬದಾಮಿ, ರಾಮದುರ್ಗ, ಬಾಗಲಕೋಟೆಗೆ ಹೋಗಿ ಗೋವಿನ ಜೋಳದ ಮೇವು ತರುತ್ತಿದ್ದಾರೆ. ಪ್ರತಿ ಟ್ಯಾಕ್ಟರ್‌ಗೆ ರು. 5-6 ಸಾವಿರ ಖರ್ಚು ಮಾಡಿ ಜಾನುವಾರುಗಳಿಗೆ ಮೇವು ಸಂಗ್ರಹ ಮಾಡಿಕೊಂಡಿದ್ದರು. ಆದರೆ, ಇಂದು ಸಂಗ್ರಹ ಮಾಡಿದ ಎಲ್ಲ ಮೇವು ಖಾಲಿಯಾಗಿದೆ. ಸದ್ಯ ಮತ್ತೆ ಜಾನುವಾರುಗಳಿಗೆ ಮೇವು ಸಂಗ್ರಹ ಮಾಡಿಕೊಳ್ಳಬೇಕೆಂದರೆ ರೈತರ ಕೈಯಲ್ಲಿ ಹಣವಿಲ್ಲ. ಹಾಗಾಗಿ ರೈತರು ರು. 50-60 ಸಾವಿರ ಕೊಟ್ಟು ತಂದಂತಹ ಎತ್ತುಗಳನ್ನು ಈಗ ರು. 20-25 ಸಾವಿರಕ್ಕೆ ಮಾರುವ ಪರಿಸ್ಥಿತಿ ಎದುರಾಗಿದೆ.
ಗೋ ಶಾಲೆ ಪ್ರಾರಂಭಿಸಿ: ಸರ್ಕಾರವು ಕಳೆದ ವರ್ಷ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಹಾನಗಲ್ ಕುಮಾರೇಶ್ವರ ಗೋ ಶಾಲೆಯನ್ನು ತೆರೆದಿತ್ತು. ಆದರೆ, ಇದರಿಂದ ಈ ತಾಲೂಕಿನ ಹೆಚ್ಚು ರೈತರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಸರ್ಕಾರ ಈ ಭಾಗದಲ್ಲಿ ನಾಲ್ಕು ಕಡೆ ಅಥವಾ ಹೋಬಳಿಗೊಂದು ಗೋ ಶಾಲೆ ಪ್ರಾರಂಭಿಸಿದ್ದರೆ ಎಲ್ಲ ರೈತರಿಗೆ ಅನುಕೂಲವಾಗುತಿತ್ತು. ಈ ಬಾರಿಯಾದರೂ ಸರ್ಕಾರ ಬೇಗನೇ ಎಚ್ಚೆತ್ತುಕೊಂಡು ರೈತ ಸಮುದಾಯ ತಮ್ಮ ಎಲ್ಲ ಜಾನುವಾರಗಳನ್ನು ಮಾರಾಟ ಮಾಡುವ ಮೊದಲೇ ಗೋ ಶಾಲೆ ಪ್ರಾರಂಭಿಸುವುದು ಅವಶ್ಯವಿದೆ.
- ಎಸ್.ಜಿ. ತೆಗ್ಗಿನಮನಿ