ಹಳ್ಳೆಪ್ಪನವರ್ ಪ್ರಚಾರಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 12
ಶಿರಹಟ್ಟಿ ವಿಧಾನಸಭಾ ಮೀಸಲು ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಮಹಾಂತೇಶ ಹಳ್ಳೆಪ್ಪನವರ ಹಾಗೂ ಬೆಂಬಲಿಗರು ಶುಕ್ರವಾರ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದರು.
ಜಿಲ್ಲಾ ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ್ ಮಾತನಾಡಿ, ಶಿರಹಟ್ಟಿ ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮತದಾರರು ಆಶೀರ್ವಾದಿಸುವ ವಿಶ್ವಾಸವಿದ್ದು, ಪಕ್ಷದ ಮುಖಂಡ ಸಣ್ಣ ವೀರಪ್ಪ ಹಳ್ಳೆಪ್ಪನವರ ಅವರು ಸಾಮೂಹಿಕ ವಿವಾಹ, ಬಡವರ ಹಾಗೂ ಹಿಂದುಳಿದ ವರ್ಗದವರಿಗಾಗಿ ಮಾಡಿರುವ ಅನೇಕ ಜನಪರ ಕಾರ್ಯಗಳೇ ಅವರ ಸೊಸೆ ಅಭ್ಯರ್ಥಿ ಜಯಶ್ರೀ ಅವರ ಗೆಲುವಿಗೆ ಕಾರಣವಾಗಲಿದೆ ಎಂದರು. ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ ಮಾತನಾಡಿ, ಶಿರಹಟ್ಟಿ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದ್ದು, ಅಭಿವೃದ್ಧಿಗಾಗಿ ಈ ಕ್ಷೇತ್ರದ ಮತದಾರರ ಆಶೀರ್ವಾದ ಬಯಸಿದ್ದೇನೆ. ಈ ಕ್ಷೇತ್ರದ ಜನರ ಸೇವೆ ಮಾಡಲು ನನಗೆ ಬೆಂಬಲಿಸಬೇಕು ಎಂದು ವಿನಂತಿಸಿದರು.
ಪಟ್ಟಣದ ಅಂಬಾಭವಾನಿ ನಗರ, ಮುಖ್ಯ ಬಜಾರ್, ಅನ್ನದಾನೀಶ್ವರ ಮಠದ ವೃತ್ತ, ಕೋಟೆಭಾಗ, ದುರ್ಗಾದೇವಿ ನಗರ ಸೇರಿದಂತೆ ವಿದ್ಯಾನಗರ, ಕೊಪ್ಪಳ ವೃತ್ತದ ಮೂಲಕ ರೋಡ್ ಶೋ ನಡೆಸಿ ಮತಯಾಚಿಸಿದರು. ಮಹಾಂತೇಶ ಹಳ್ಳೆಪ್ಪನವರ, ಕುಮಾರಸ್ವಾಮಿ ಹಿರೇಮಠ. ಪುರಸಭೆ ಮಾಜಿ ಸದಸ್ಯ ಮೋದಿನಸಾಬ ಡಂಬಳ, ರಾಮಣ್ಣ ಕೋಳಿ, ಮಲ್ಲಿಕಾರ್ಜುನ ದೊಡ್ಡಮನಿ, ಮಂಜುಳಾ ಮೇಟಿ ಸೇರಿದಂತೆ ಪ್ರಚಾರ ಕಾರ್ಯದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.