ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭಿಸಂಧಾನ ಶುಲ್ಕ ವಸೂಲಿ

Vishwanath S
Updated On : 14 Apr 2013, 12:06 pm

ಗದಗ:  ಜಿಲ್ಲೆಯಲ್ಲಿ ಒಟ್ಟು ರು. 13,94,720 ಸತ್ಯಾಪನೆ ಶುಲ್ಕ ಸಂಗ್ರಹಿಸಲಾಗಿದೆ. ಕಿರಾಣಿ ವ್ಯಾಪಾರಸ್ಥರು, ನ್ಯಾಯ ಬೆಲೆ ಅಂಗಡಿಗಳು, ಸೀಮೆ ಎಣ್ಣೆ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರು ಹಾಗೂ ಇನ್ನಿತರ ಒಟ್ಟು 2558 ಅಂಗಡಿಗಳ ತಪಾಸಣೆ ಮಾಡಿ, ತಪ್ಪಿತಸ್ಥರ ವಿರುದ್ಧ ಒಟ್ಟು 510 ಮೊಕದ್ದಮೆ ಹೂಡಲಾಗಿದೆ. ಅವುಗಳನ್ನು ಅಭಿಸಂದಾನದ ಮೂಲಕ ಇತ್ಯರ್ಥ ಮಾಡಿ, ಮಾರ್ಚ್ 2013ರ ವರೆಗೆ ಒಟ್ಟು ರು. 6.79 ಲಕ್ಷ ಅಭಿಸಂಧಾನ ದಂಡದ ಶುಲ್ಕವನ್ನು ವಸೂಲು ಮಾಡಲಾಗಿದೆ. ತೂಕ ಮತ್ತು ಅಳತೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಗ್ರಾಹಕರು ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ವೀರನಾರಾಯಣ ಗುಡಿ ರಸ್ತೆ, ಗದಗ ಈ ವಿಳಾಸಕ್ಕೆ ಸಲ್ಲಿಸಬಹುದು ಎಂದು ಕಾನೂನು ಮಾಪನ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮತಪಟ್ಟಿ ಸೇರ್ಪಡೆ ಖಚಿತಪಡಿಸಿಕೊಳ್ಳಿ
ಗದಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ನೋಂದಣಿ, ಪಟ್ಟಿ ಪರಿಷ್ಕರಣೆಯ ಕುರಿತಂತೆ ಸಾಕಷ್ಟು ಮನವಿಗಳು ಬಂದಿವೆ. ಸ್ವೀಕೃತವಾದ ಎಲ್ಲ ಮನವಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಅಂತ ಭಾವಿಸುವಂತಿಲ್ಲ. ಸ್ವೀಕೃತವಾದ ಎಲ್ಲ ಅರ್ಜಿಯ ವಿವರಗಳ ಸಂಖ್ಯೆ ಮುಖ್ಯ ಚುನಾವಣಾ ಆಯುಕ್ತರ ಕಾರ್ಯಾಲಯಕ್ಕೆ ಸಲ್ಲಿಸಲಾಗುತ್ತಿದೆ. ಅವುಗಳನ್ನು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ. ಅರ್ಹ ಅರ್ಜಿಗಳನ್ನು ಮಾತ್ರ ಮತದಾರರ ನೋಂದಣಿ ಅಧಿಕಾರಿಗಳಾದ ಉಪವಿಭಾಗಾಧಿಕಾರಿಗಳು ಮತದಾರರನ್ನಾಗಿ ಪಟ್ಟಿಗೆ ಸೇರ್ಪಡೆ ಮಾಡುತ್ತಾರೆ. ಮತದಾರರು ಯಾವುದೇ ತಪ್ಪು ಗ್ರಹಿಕೆ ಮಾಡಿಕೊಳ್ಳದಂತೆ ಮನವಿ ಮಾಡಲಾಗಿದೆ ಎಂದು ಗದಗ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

4 ನಾಮಪತ್ರಗಳು ಸಲ್ಲಿಕೆ
ಗದಗ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ ಶನಿವಾರ 4 ನಾಮಪತ್ರಗಳು ಸಲ್ಲಿಕೆಯಾಗಿವೆ. ಶಿರಹಟ್ಟಿ ಮತಕ್ಷೇತ್ರದಲ್ಲಿ 1, ಗದಗ ಮತಕ್ಷೇತ್ರದಲ್ಲಿ 1 ಹಾಗೂ ನರಗುಂದ ಮತಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ವರೆಗೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 7 ಅಭ್ಯರ್ಥಿಗಳು 9 ನಾಮಪತ್ರ ಸಲ್ಲಿಸಿದಂತಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರು ಪೂರೈಕೆ ಮಾಹಿತಿ
ಗದಗ:  ನಗರದ ಎಸ್.ಎಂ. ಕೃಷ್ಣ ನಗರ, ಕೆಂಗೇರಿ ಓಣಿ, ಟೆಂಗಿನಕಾಯಿ ಬಜಾರ, ಕಬಾಡಿ ಲೈನ್, ಬೆಟಗೇರಿಯ ಕಿಲ್ಲಾ, ಗಾರ್ಗಿಪೇಟೆ, ಜವುಳ ಹಳ್ಳದ ಉಳಿದ ಭಾಗಗಳಲ್ಲಿ ಭಾನುವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ
ನರಗುಂದ: ಪಟ್ಟಣದ ಹಗೇದಕಟ್ಟಿ ಓಣಿಯ ಲತಾ ಆಲೂರ (34) ಎಂಬ ಮಹಿಳೆ ಹೊಟ್ಟೆನೋವು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
ಗದಗ: ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ತೊಡಗಿಸಿಕೊಂಡ ಪ್ರಕರಣಗಳು ಗಮನಕ್ಕೆ ಬಂದಿವೆ. ಈ ಮಕ್ಕಳು ಶಾಲಾ ಸಮಯದಲ್ಲಿ ಶಾಲೆಗಳಲ್ಲಿ, ಉಳಿದ ಅವಧಿಯಲ್ಲಿ ತಮ್ಮ ಕುಟುಂಬ ವ್ಯವಸ್ಥೆಯಲ್ಲಿ ಇರಬೇಕಾಗಿದ್ದು ನ್ಯಾಯಯುತ. ಆದರೆ ಅಪ್ರಬುದ್ಧ ಮಕ್ಕಳನ್ನು ಚುನಾವಣಾ ಪ್ರಚಾರಗಳಲ್ಲಿ ಅಂದರೆ ಕರಪತ್ರ ಹಂಚಲು, ಭಿತ್ತಿಪತ್ರ ಅಂಟಿಸಲು ಹಾಗೂ ಮೆರವಣಿಗೆಯಲ್ಲಿ ಬಳಸಿದ್ದು ಗೊತ್ತಾಗಿದೆ. ಮಕ್ಕಳನ್ನು ಯಾವುದೇ ರಾಜಕೀಯ ಪ್ರಚಾರದ ಉದ್ದೇಶಗಳಿಗಾಗಿ ಬಳಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ, ಪಕ್ಷಗಳ ಮೇಲೆ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮುಖ ದಾಖಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ವೆಚ್ಚ ವೀಕ್ಷಕರ ನೇಮಕ
ಗದಗ: ವಿಧಾನಸಭೆ ಚುನಾವಣೆ ಮೇ 5ರಂದು ಜರುಗಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಚುನಾವಣಾ ಖರ್ಚು ವೆಚ್ಚದ ವೀಕ್ಷಕರ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದ್ದಾರೆ. ಶಿರಹಟ್ಟಿ, ಗದಗ, ರೋಣ ಮತಕ್ಷೇತ್ರಗಳಿಗೆ ಬಿ.ಪಿ. ಯಾದವ್, ನರಗುಂದ ಮತಕ್ಷೇತ್ರಕ್ಕೆ ಅರುಣಕುಮಾರ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಲೈಸನ್ಸ್ ಆಫೀಸರ್ ಆಗಿ ಶಿರಹಟ್ಟಿ, ಗದಗ, ರೋಣ ಮತಕ್ಷೇತ್ರಗಳಿಗೆ ಎಚ್.ಆರ್. ಮುಂದಿನಮನಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement