ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಏ. 13
ಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ವಾಲ್ಮೀಕಿ ಜನಾಂಗವು ಬೆಂಬಲಿಸಿದಲ್ಲಿ ಕಾಂಗ್ರೆಸ್ ಪಕ್ಷವು ವಿಜಯ ಪತಾಕೆ ಹಾರಿಸಲಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಶನಿವಾರ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ವಾಲ್ಮೀಕಿ ಮತ್ತು ನಾಯಕ ಸೇವಾ ಸಂಘದ ವತಿಯಿಂದ ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದವರ ಸಮಾವೇಶ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮಾಜದ ಬೆಂಬಲ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯವು ದೊಡ್ಡದಾಗಿದೆ. ಪಕ್ಷಗಳು ಬೆಳೆಯಲು ಹಾಗೂ ಅಭಿವೃದ್ಧಿ ಹೊಂದಲು ಎಲ್ಲ ಸಮಾಜದ ಪಾತ್ರವು ಪ್ರಮುಖವಾಗಿದ್ದು, ಹಾಗಾಗಿ ವಾಲ್ಮೀಕಿ ಸಮುದಾಯವು ಈಗ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ನನಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಿದೆ. ರಾಜ್ಯದ, ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲ ಜನಾಂಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು, ಸಮಾಜ ಬಾಂಧವರು ಶ್ರಮಿಸುವ ಮೂಲಕ ಜನರ ಆಶೋತ್ತರಗಳಿಗೆ, ಕಷ್ಟ, ನಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಲು ಅನುಕೂಲ ಕಲ್ಪಿಸುವಂತೆ ಕೋರಿದರು.
ಕಾಂಗ್ರೆಸ್ ಕಮಿಟಿ ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿ, ವಾಲ್ಮೀಕಿ ಸಮುದಾಯವು ಎಂದಿಗೂ ಕಾಂಗ್ರೆಸ್ ಪರವಾಗಿದ್ದು, ಆದರೆ, ದುರದೃಷ್ಟಶಾತ್ 2008ರ ಚುನಾವಣೆಯಲ್ಲಿ ಸಮುದಾಯದ ಕೆಲವರು ಅನ್ಯ ಪಕ್ಷಗಳ ಆಸೆ, ಆಮಿಷಗಳಿಗೆ ಬಲಿಯಾಗಿ ಅನ್ಯ ಪಕ್ಷಕ್ಕೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಯಿತು. ಆದರೆ, ಈ ಹಿಂದೆ ಆಡಳಿತ ನಡೆಸಿದ ಬಿಜೆಪಿಯು ವಾಲ್ಮೀಕಿ ಜನಾಂಗದವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸಮಾಜಕ್ಕೆ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಲ್ಲ. ಸಮಾಜದ ಎಲ್ಲ ಜನರು ಎಚ್.ಕೆ. ಪಾಟೀಲರಿಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಕೈ ಬಲಪಡಿಸುವಂತೆ ಕೋರಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಮಣ್ಣ ಫಲದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾಂತೇಶ ಬೆಳದಡಿ, ವಸುಂಧರಾ ಪಾಟೀಲ, ಹುಲಗಪ್ಪ ತಳವಾರ, ಯಲ್ಲಪ್ಪ ತಳವಾರ, ಜ್ಯೋತಿ ಇರಾಳ, ವಸಂತ ಸಿದ್ದಣ್ಣವರ ಮುಂತಾದವರು ಉಪಸ್ಥಿತರಿದ್ದರು. ಭರತ ಇರಾಳ ಸ್ವಾಗತಿಸಿ, ನಿರೂಪಿಸಿದರು.