ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ
ಕನ್ನಡಪ್ರಭ ವಾರ್ತೆ, ಗದಗ/ನರಗುಂದ, ಏ. 13
ರಾಜ್ಯದಲ್ಲಿ ಈ ಬಾರಿ ಚುನಾವಣಾ ಆಯೋಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಚುನಾವಣೆ ಆಯುಕ್ತರು ಮಾಧ್ಯಮದ ಮೂಲಕ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅದೇ ರೀತಿ ನರಗುಂದ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಶಶಿಧರ ಕುರೇರ ನೇಮಕವಾಗಿದ್ದಾರೆ. ಈ ಕ್ಷೇತ್ರದಲ್ಲಿ ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆ ನಿಯಮಗಳು ಉಲ್ಲಂಘನೆಯಾಗುತ್ತಾ ಬಂದರೂ ಕಣ್ಮುಚ್ಚಿ ಕುಳಿತಿರುವ ಈ ಅಧಿಕಾರಿಗಳು ಕೇವಲ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಆಯೋಗದ ಪಾಠವನ್ನು ಹೇಳುತ್ತಿರುವುದು ತೀರಾ ಹಾಸ್ಯಾಸ್ಪದ ಸಂಗತಿಯಾಗಿದೆ.
ರಾಜಕೀಯ ಪಕ್ಷದವರು ಹಲವಾರು ನಿಯಮ ಉಲ್ಲಂಘಿಸಿದರೂ ಅವರ ಮೇಲೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ಮಾಧ್ಯಮದವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಪೋಟೋ ತೆಗೆಯಲು ಅವಕಾಶ ಇರುವುದಿಲ್ಲ. ನೀವು ಪೋಟೋ ತೆಗೆಯಬೇಕಾದರೆ ಹೊರಗೆ ನಿಂತು ತೆಗೆದುಕೊಳ್ಳಿ. ನಿಮಗೆ ಒಳಗೆ ಪ್ರವೇಶವಿಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಹೇಳುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಚುನಾವಣಾ ಆಯೋಗದ ಪ್ರಕಾರ ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಸೇರಿ 5 ಜನ ಮಾತ್ರ ಇರಬೇಕೆಂದು ನಿಯಮವಿದೆ. ಆದರೆ, ಚುನಾವಣೆ ಆಯೋಗದವರು ಮಾಧ್ಯಮದವರು ಇರಬಾರದೆಂದು ಎಲ್ಲಿಯೂ ತಿಳಿಸಿಲ್ಲ. ಆದರೆ ಈ ಅಧಿಕಾರಿಗಳು ಪತ್ರಿಕೆ ಮತ್ತು ಟಿವಿ ಮಾಧ್ಯಮದವರಿಗೆ ಅವಕಾಶ ನಿರಾಕರಣೆ ಮಾಡುವ ಉದ್ದೇಶ ತಿಳಿಯದಾಗಿದೆ. ಹಲವಾರು ರಾಜಕೀಯ ಪಕ್ಷದ ನಾಯಕರು, ಸಹಕಾರ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಭಯ ಭೀತಿ ಇಲ್ಲದೇ ತಮ್ಮ ಪಕ್ಷದ ಚುನಾವಣೆ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ಬಂದರೂ ಚುನಾವಣಾಧಿಕಾರಿಗಳು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ. ರಾಜ್ಯದ ಇನ್ನುಳಿದ ಎಲ್ಲ ಜಿಲ್ಲೆಗಳಲ್ಲಿಯೂ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೇವಲ ಗದಗ ಜಿಲ್ಲೆಯಲ್ಲಿ ಮಾತ್ರ ಅಧಿಕಾರಿಗಳು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಲು ಜಿಲ್ಲಾಧಿಕಾರಿಯವರನ್ನು ಕೇಳಿದರೆ, ಅವರು ಅದು ಅಲ್ಲಿನ ಅಧಿಕಾರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸುತ್ತಾರೆ. ಕೇವಲ ಮಾಧ್ಯಮಗಳಿಗೆ ಮಾತ್ರ ಕಡಿವಾಣ ಹಾಕಿ, ತಮ್ಮ ಕಣ್ಣೆದುರೇ ರಾಜಕೀಯ ಪಕ್ಷಗಳು ಸಾಕಷ್ಟು ನೀತಿ ಸಂಹಿತೆ ಉಲ್ಲಂಘಿಸಿದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ದ್ವಂದ್ವ ನೀತಿ ಆಶ್ಚರ್ಯಕ್ಕೆ ಕಾರಣವಾಗಿದೆ.
-ವಿಶೇಷ ವರದಿ