ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಂಡಾಯದ ನಾಡಲ್ಲಿ ನೀರಿಗೆ ಬರ

Lingaraj Badiger
Updated On : 15 Apr 2013, 12:11 pm

ಕನ್ನಡಪ್ರಭ ವಾರ್ತೆ, ನರಗುಂದ, ಏ. 14
ಉತ್ತರ ಕರ್ನಾಟಕದಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕು ಬಯಲು ಸೀಮೆಯ ನಾಡು. ಸದ್ಯ ಇಲ್ಲಿ ಬರದ ಕರಿ ನೆರಳು ಕವಿದಿದ್ದು, ಬೇಸಿಗೆಯ ಸುಡು ಬಿಸಿಲಿನ ಈ ದಿನಗಳಲ್ಲಿ ಜನ, ಜಾನುವಾರುಗಳಿಗೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಎರಡು ವರ್ಷದಿಂದ ಮುಂಗಾರು ಮತ್ತು ಹಿಂಗಾರು ಮಳೆ ಸಂರ್ಪೂಣ ಕೈ ಕೊಟ್ಟ ಹಿನ್ನೆಲೆಯಲ್ಲಿ ಈ ಭಾಗದ ಬನಹಟ್ಟಿ, ಕುರ್ಲಗೇರಿ, ಭೈರನಹಟ್ಟಿ, ಮುದ್ಗುಣಕಿ, ಹದಲಿ, ಗಂಗಾಪುರ, ಖಾನಪುರ, ರಡ್ಡೇರ ನಾಗನೂರ, ಚಿಕ್ಕನರಗುಂದ, ಸಂಕದಾಳ, ಹಿರೇಕೋಪ್ಪ, ಹುಣಸಿಕಟ್ಟಿ, ಜಗಪುರ, ಗುರ್ಲಕಟ್ಟಿ, ಕಣಕಿಕೊಪ್ಪ ಗ್ರಾಮಗಳ ಜನತೆ ಕುಡಿಯುವ ನೀರಿಗೆ ಸಂಪೂರ್ಣ ಕೆರೆಗಳನ್ನೇ ಅವಲಂಬಿಸಿವೆ. ಈ ಹಿಂದೆ ಅಗತ್ಯ ಪ್ರಮಾಣದಲ್ಲಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆರೆಗಳು ಭರ್ತಿಯಾಗುತ್ತಿದ್ದವು. ಆದರೆ, ಎರಡು ವರ್ಷದಿಂದ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದಿರುವುದರಿಂದ ಜನತೆ ಮಲಪ್ರಭಾ ಜಲಾಶಯದಲ್ಲಿ ನೀರನ್ನೇ ಅವಲಂಬಿಸಿದ್ದಾರೆ.
ಮಲಪ್ರಭಾ ಜಲಾಶಯ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ಜಲಾಶಯವು ಭರ್ತಿಯಾಗಿಲ್ಲ. ಈಗಾಗಲೇ ಜಲಾಶಯದಲ್ಲಿದ್ದ ಅಲ್ಪ ಪ್ರಮಾಣದ ನೀರನ್ನೇ ರೈತರು ಜಮೀನಿಗೆ ಹಾಗೂ ಕುಡಿಯಲು ಉಪಯೋಗಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಈ ವರ್ಷ ನರಗುಂದ ಭಾಗದಲ್ಲಿ ಕೇವಲ 30 ದಿನಗಳ ವರೆಗೆ ಕಾಲುವೆ ನೀರು ಹರಿಸಲಾಗಿದೆ. ಈ ಸಂದರ್ಭದಲ್ಲಿ ರೈತರು ತಮ್ಮ ಜಮೀನುಗಳಿಗೆ ಹೆಚ್ಚಿಗೆ ನೀರನ್ನು ಬಳಕೆ ಮಾಡಿದ ಹಿನ್ನೆಲೆಯಲ್ಲಿ ಇಂದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ನೀರಿಗಾಗಿ ಪರದಾಟ: ಇಡೀ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೆಂಪಕೆರೆಗೆ ಹೆಚ್ಚು ನೀರು ತುಂಬಿಸಲು ಸಾಧ್ಯವಾಗದೇ ಇರುವುದರಿಂದ ಇಂದು ಪಟ್ಟಣದಾದ್ಯಂತ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಸಾರ್ವಜನಿಕರು ಸಂಪರ್ಕಿಸಿದರೆ, ಪಟ್ಟಣದ ಹಲವು ಕಡೆಗಳಲ್ಲಿ ಬೋರ್‌ವೆಲ್ ಕೊರೆಯಿಸಿದರೂ ನೀರು ಬಂದಿಲ್ಲ. ಮಲಪ್ರಭಾ ಜಲಾಶಯದಿಂದ ಕಾಲುವೆ ಮೂಲಕ ನೀರು ಬರಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ಕಾಲುವೆಗೆ ನೀರು ಬಂದಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಇದರಿಂದಾಗಿ ಜನರು ತಮ್ಮ ನಿತ್ಯದ ಉದ್ಯೋಗ ಮಾಡದೇ ನೀರಿಗಾಗಿ ಅಲೆಯುವ ಪರಿಸ್ಥಿತಿ ಎದುರಾಗಿದೆ.
ಅಶುದ್ಧ ನೀರು: ಗ್ರಾಮೀಣ ಪ್ರದೇಶದ ಕೆರೆಗಳಲ್ಲಿ ನೀರು ತಳಮಟ್ಟಕ್ಕೆ ತಲುಪಿದ ಹಿನ್ನೆಲೆಯಲ್ಲಿ ತಳಭಾಗದಲ್ಲಿರುವ ಜೇಡಿಮಣ್ಣು ನೀರಿನೊಂದಿಗೆ ಬರುತ್ತಿರುವುದರಿಂದ ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಆದರೂ ಜನರು ಅನಿವಾರ್ಯವಾಗಿ ಇದೇ ನೀರನ್ನೇ ಕುಡಿಯುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಹಲವು ಮಾರಕ ರೋಗಗಳು ಸಾರ್ವಜನಿಕರಿಗೆ ಬರುವ ಸಂಭವವಿದೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದರೆ, ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಅಗತ್ಯವಿದ್ದಲ್ಲಿ ಬೋರವೆಲ್ ಕೊರೆಯಿಸಿದರೂ ಕೂಡ ಹನಿ ನೀರು ಬಿಳುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕೆಂಪಕೆರೆಗೆ ಕಾಲುವೆ ಮೂಲಕ ನೀರು ಹರಿಸಲಾಗುವುದು ಎಂಬ ಹಾರಿಕೆ ಉತ್ತರ ನೀಡುತ್ತಾರೆ.
-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement