ಬೇಸಿಗೆ ಶಿಬಿರ ಸಹಕಾರಿ
ಗಜೇಂದ್ರಗಡ: ಬೇಸಿಗೆ ಶಿಬಿರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಸುಹಾಸಕುಮಾರ ಪಟ್ಟೇದ ಹೇಳಿದರು. ಈಚೆಗೆ ಅವರು ಸ್ಥಳೀಯ ಮೈಸೂರು ಮಠದಲ್ಲಿ ಜ. ತೋಟಂದಾರ್ಯ ವಿದ್ಯಾಪೀಠ ಸಿಬಿಎಸ್‌ಸಿ ಶಾಲೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಶಿಬಿರದಲ್ಲಿ ಎಲ್ಲರೊಂದಿಗೆ ಕಲಿತು, ಬೆರೆಯುವುದರಿಂದ ಸಾಂಘಿಕ ಜೀವನ ಅರಿವು ಆಗುತ್ತದೆ. ಆಟಗಳು ಮಕ್ಕಳ ಮನಸ್ಸನ್ನು ವೃದ್ಧಿಸುತ್ತವೆ. ಬೇಸಿಗೆ ಶಿಬಿರ ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಲಿದೆ. ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರ ಹೀಗೆ ಮಗುವೊಂದರ ನಿಜವಾದ ವಿಕಾಸದ ವೇದಿಕೆಯಾಗಬಲ್ಲದು. ಮಕ್ಕಳಲ್ಲಿ ಹೊಸ ಜವಾಬ್ದಾರಿ ಬೆಳೆಯುತ್ತದೆ ಎಂದರು. ಶಿಕ್ಷಕಿ ಸಾಜಿಯಾ ಕಿತ್ತೂರ, ನೂರಜಾನ ಜಾತಗೇರ ಮಾತನಾಡಿ, ಬೇರೆ ಬೇರೆ ಕಡೆಗಳಿಂದ ಹೊಸ ಮುಖಗಳ ಪರಿಚಯ ನಿಮ್ಮ ಮಕ್ಕಳಿಗಾಗುತ್ತದೆ. ಪ್ರತಿ ದಿನ ಅದೇ ಶಾಲೆ, ಅದೇ ಸ್ನೇಹಿತರನ್ನು ಹೊಂದಿದ್ದ ಮಗುವಿಗೆ ಇಲ್ಲಿ ಹೊಸ ಸ್ನೇಹಿತರು ದೊರಕುತ್ತಾರೆ ಎಂದರು. ಬಾಬು ರೇವಡಿ, ಬಿ.ಎಂ. ಗದಗೇರಿ, ಈರಣ್ಣ ಮಲಕಣ್ಣವರ ಇದ್ದರು.
ಹಿರೇವಡ್ಡಟ್ಟಿ: 40 ಸೀರೆ ವಶ
ಮುಂಡರಗಿ: ಮುಂಡರಗಿಯಿಂದ ಹಿರೇವಡ್ಡಟ್ಟಿ ಕಡೆಗೆ 2 ಮಿನಿ ವಾಹನಗಳಲ್ಲಿ ಮತದಾರರಿಗೆ ಹಂಚಲು ಒಯ್ಯುತ್ತಿದ್ದ ಸೀರೆಗಳನ್ನು ಚುನಾವಣಾ ನೀತಿ ಸಂಹಿತೆ ತಂಡ ವಶಪಡಿಸಿಕೊಂಡಿದೆ. ಎರಡು ವಾಹನಗಳು ಹಾಗೂ ಮಹಿಳೆಯರಿಂದ 40 ಸೀರೆಗಳನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ. ಚುನಾವಣಾ ನೀತಿ ಸಂಹಿತೆ ಪಾಲನಾ ತಂಡದ ಮುಖ್ಯಸ್ಥ ಆರ್.ಎಂ. ಪಾಟೀಲರ ದೂರಿನ ಮೇಲೆ ಮುಂಡರಗಿ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಸೀರೆ ಹಾಗೂ ಮಹಿಳೆಯರಲ್ಲಿ ದೊರೆತ ಕರಪತ್ರಗಳ ಆಧಾರದಲ್ಲಿ ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಹಾಗೂ ತಪ್ಪಿಸಿಕೊಂಡ ಇಬ್ಬರು ಚಾಲಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಪಿಐ ಸುನಿಲ ಸವದಿ ತಿಳಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಮುಂಡರಗಿ ಬಸ್ ನಿಲ್ದಾಣ ಟಾಟಾ ಏಸ್ ಹಾಗೂ ಶಿರೋಳ ಬಳಿ ಟಾಟಾ ಮ್ಯಾಜಿಕ್ ವಾಹನಗಳನ್ನು ಹಿಂಬಾಲಿಸಿದ ತಂಡ ಒಂದು ವಾಹನದಲ್ಲಿ 19 ಮತ್ತು ಮತ್ತೊಂದರಲ್ಲಿ 21 ಸೀರೆ ವಶಪಡಿಸಿಕೊಂಡಿದೆ. ಸೆಕ್ಟರ್ ಆಫೀಸರ್ ಎಂ.ಎನ್. ನಾಯಕ, ಸಂಚಾರ ದಳದ ಮರಿಬಸಪ್ಪ ಸಜ್ಜನರ, ಫ್ಲೈಯಿಂಗ್ ಸ್ಕ್ವಾಡ್‌ನ ವಿವೇಕಾನಂದ ತಂಡದಲ್ಲಿದ್ದರು. ಅಕ್ರಮ ಸೀರೆ, ಹಣ, ಇತರ ವಸ್ತುಗಳನ್ನು ಹಂಚುವ ಹಾಗೂ ಆಮಿಷ ಒಡ್ಡುವ ಪ್ರಯತ್ನಗಳು ಜನರ ಗಮನಕ್ಕೆ ಬಂದರೆ ಮೊ. 9448003784 ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.
ದಾಳಿ: ಸಾರಾಯಿ ವಶ
ರೋಣ: ತಾಲೂಕಿನ ಹಿರೇಹಾಳ ಗ್ರಾಮದ ಬಸ್ ನಿಲ್ದಾಣ ಹತ್ತಿರವಿರುವ ಹೋಟೆಲ್‌ಗಳ ಮೇಲೆ ಶನಿವಾರ ರಾತ್ರಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ರು. 8 ಸಾವಿರ ಮೌಲ್ಯದ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಸಾರಾಯಿ ಮಾರಾಟ ಮಾಡುತ್ತಿದ್ದ ಯಮನಪ್ಪ ಚಪ್ರಣ್ಣವರ ಮತ್ತು ಈರಪ್ಪ ಹುಡೇದ ಎಂಬುವವರನ್ನು ಬಂಧಿಸಿದ್ದು, ಶಿವನಗೌಡ ಪಾಟೀಲ ಎಂಬುವರು ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ ಅಬಕಾರಿ ಮತ್ತು ಅಬಕಾರಿ ಉಪ ನಿರೀಕ್ಷಕ ಎಚ್.ಪಿ. ನಾಯಕ ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಜಿ.ಎಸ್. ಪಾಟೀಲ
ಗಜೇಂದ್ರಗಡ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ರೋಣ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಸಮೀಪದ ಸೂಡಿ ಗ್ರಾಮದಲ್ಲಿ ಸೋಮವಾರ ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡವರನ್ನು ಸ್ವಾಗತಿಸಿ, ಮಾತನಾಡಿದರು. ರಾಜ್ಯದ ಜನತೆಯ ಅನುಕಂಪ ಗಿಟ್ಟಿಸಿ, ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಗುರ್ತಿಸಿ, ರಾಜ್ಯದ ಘನತೆಯನ್ನು ಹರಾಜು ಮಾಡಿದೆ ಎಂದು ದೂರಿದರು. ರೋಣ ಕ್ಷೇತ್ರದ ಶಾಸಕರ ಏಕ ಚಕ್ರಾಧಿಪತ್ಯದ ವರ್ತನೆ ಕ್ಷೇತ್ರದ ಜನತೆಗೆ ಬೇಸರ ಮೂಡಿಸಿದೆ. ಈ ಬಾರಿ ಕ್ಷೇತ್ರದ ಜನತೆ ಬಿಜೆಪಿಯನ್ನು ಬೇರು ಮಟ್ಟದಿಂದ ಕಿತ್ತೊಗೆಯಲು ಸಂಕಲ್ಪ ತೊಟ್ಟಿದ್ದು, ರೋಣ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಅಲೆ ಎದ್ದಿದೆ ಎಂದರು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೀರಣ್ಣಾ ಶೆಟ್ಟರ್, ಮೋಹನಸಾ ರಾಯಬಾಗಿ, ವೀರಣ್ಣಾ ಸೊನ್ನದ, ಎಸ್.ಬಿ. ಪಾಟೀಲ, ಶಮಸುದ್ದೀನ ನದಾಫ ಮುಂತಾದವರು ಮಾತನಾಡಿದರು. ವ್ಹಿ.ಆರ್. ಗುಡಿಸಾಗರ, ವಿರುಪಾಕ್ಷಪ್ಪ ಕರವಳ್ಳಿ, ಬಸವರಾಜ ಬೆಲ್ಲದ, ಚಂಬಣ್ಣಾ ಚವಡಿ, ಶಿವಕುಮಾರ ಪಟ್ಟಣಶೆಟ್ಟರ, ನಿಂಗಪ್ಪ ಕಾಶಪ್ಪನವರ, ಪರಶುರಾಮ ಅಳಗವಾಡಿ, ಬಸವರಾಜ ಮಾರನಬಸರಿ, ಅಶೋಕ ದೇಶಣ್ಣವರ ಮತ್ತಿತರರು ಇದ್ದರು.