ಮಳಿ-ಬೆಳಿ ಚೆನ್ನಾಗಿ ಆಗತೈತಿ..ರೈತರು ಚಿಂತಿ ಮಾಡಬ್ಯಾಡ್ರಿ..
ಕನ್ನಡಪ್ರಭ ವಾರ್ತೆ, ಗದಗ, ಏ. 14
ಈ ಬಾರಿ ಮಳಿ-ಬೆಳಿ ಚೆನ್ನಾಗಿ ಆಗತೈತಿ...ರೈತರು ಚಿಂತಿ ಮಾಡಬ್ಯಾಡ್ರಿ...
ಅರೆ ! ಇದೇನಿದು, ಯಾವುದೇ ರಾಜಕಾರಣಿ ಜನರ ಮತ ಗಿಟ್ಟಿಸಿಕೊಳ್ಳಲು ಪ್ರಚಾರದಲ್ಲಿ ಹೇಳುತ್ತಿರುವ ಮಾತು ಎಂದು ತಿಳ್ಕೊಬೇಡಿ. ಬದಲಾಗಿ ಶತ ಶತಮಾನಗಳಿಂದಲೂ ಊರು ಊರಿಗೆ ತೆರಳಿ ಭವಿಷ್ಯದಲ್ಲಾಗುವ ಆಗು ಹೋಗುಗಳ ಬಗ್ಗೆ ಜನರಿಗೆ ತಿಳಿಸುತ್ತಾ ಸಾಗುವ ಐನಾರು (ಶರಣರು) ಭಾನುವಾರ ತಾಲೂಕಿನ ಕೋಟುಮಚಗಿ ಗ್ರಾಮಕ್ಕೆ ಆಗಮಿಸಿದ ವೇಳೆ ಜನರಿಗೆ ಈ ರೀತಿ ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಸಾರುವ ಶರಣರೆಂದೇ ಪ್ರಸಿದ್ಧಿ ಹೊಂದಿರುವ ಇವರು ಮೂಲತಃ ಜಮಖಂಡಿ ಹತ್ತಿರವಿರುವ ಬಬಲಾದಿ ಮಠದವರು. ಇಲ್ಲಿ ಈ ಹಿಂದೆ ಬಬಲಾದಿ ಶ್ರೀಗಳಿದ್ದರು. ಅವರು ಒಬ್ಬರೇ ರಾಜ್ಯಾದ್ಯಂತ ಸಂಚರಿಸುತ್ತಿದ್ದರು. ಇವರು ತಿಂಗಳುಗಟ್ಟಲೆ ತಪಸ್ಸನ್ನು ಮಾಡವ ಮೂಲಕ ತಮ್ಮ ದಿವ್ಯ ವಾಣಿಯಲ್ಲಿ ಕಾಣುವ ಹೇಳಿಕೆಗಳನ್ನು ರಾಜ್ಯಾದ್ಯಂತ ಸಂಚರಿಸಿ ಹೇಳುತ್ತಾರೆ. ಒಂದು ವರ್ಷದವರಗೆ ರಾಜ್ಯದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಜನರಿಗೆ ತಿಳಿಸುತ್ತಾ, ಗ್ರಾಮ ಗ್ರಾಮಗಳಿಗೆ ಸಂಚರಿಸಿ, ಅಲ್ಲಿ ನೀಡುವ ಉಡುಗೊರೆ, ಭಿಕ್ಷೆಯನ್ನು ಪಡೆದು, ಮರಳಿ ಬಬಲಾದಿ ಮಠಕ್ಕೆ ತೆರಳಿ ಜನತೆಗೆ ಒಳಿತಾಗಲಿ ಎಂದು ವಿಶೇಷ ಹೋಮ, ಹವನ ಮಾಡುತ್ತಾರೆ.
ಭಾನುವಾರ ಕೋಟುಮಚಗಿ ಗ್ರಾಮಕ್ಕೆ ಬಂದಿದ್ದ ಸಾರುವ ಶರಣರಾದ ಪುಟ್ಟಯ್ಯ ಶ್ರೀಗಳು, ಹಾಗೂ ನಂಜುಂಡಸ್ವಾಮಿಗಳು ಇವರು ಮೂಲತಃ ಹಿರೇಕೆರೂರಿನವರು. ಇವರು 6 ವರ್ಷಗಳು ಇರುವಾಗಲೇ ಹಾನಗಲ್ಲ ಗುರು ಕುಮಾರೇಶ್ವರ ಶಾಲೆಯಲ್ಲಿ ಶಿಕ್ಷಣ ಪಡೆದು, ನಂತರ ಬಬಲಾದಿ ಶ್ರೀಗಳಿಗೆ ಮಾರುಹೋಗಿ ಅವರ ಶಿಷ್ಯರಾದರು. ನಂತರ ಹಲವು ವರ್ಷಗಳ ಕಾಲ ಇವರ ಬಳಿಯೇ ಶಿಕ್ಷಣ ಪಡೆದು, ಬಬಲಾದಿ ಶ್ರೀಗಳ ಹಾದಿಯಲ್ಲಿಯೇ ಇಂದಿಗೂ ಮುನ್ನಡೆಯುತ್ತಿದ್ದಾರೆ.
- ಅಜೀಜಅಹ್ಮದ ಬಳಗಾನೂರ