ಜನಾಭಿಮತ
ಎಲ್ಲ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಗರಣಗಳನ್ನು ನಡೆಸಿ ರಾಜ್ಯವನ್ನು ಲೂಟಿ ಮಾಡಿವೆಯೇ ಹೊರತು ಅಭಿವೃದ್ಧಿಗೊಳಿಸಿಲ್ಲ. ಎಲ್ಲ ಪಕ್ಷದವರೂ ನಾವು ಅಷ್ಟು ಅಭಿವೃದ್ಧಿ ಮಾಡಿದ್ದೇವೆ. ಇಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಬೀಗುತ್ತಿದ್ದಾರೆ. ಎಲ್ಲ ಪಕ್ಷಗಳು ರಾಜ್ಯವನ್ನು ಅಭಿವೃದ್ಧಿ ಮಾಡಿದ್ದೇ ಆದಲ್ಲಿ ಇಂದಿಗೆ ರಾಜ್ಯವು ಇತರೇ ರಾಜ್ಯಗಳಿಗೆ ಮಾದರಿಯಾಗುತ್ತಿತ್ತು. ಆದರೆ, ಇಂದಿಗೂ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಗರಣಗಳು ಹೆಚ್ಚಾಗುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಕಾರಣ ಮುಂಬರುವ ಪಕ್ಷಗಳಾದರೂ ಸ್ವ-ಹಿತಾಸಕ್ತಿಯನ್ನು ಕೈಬಿಟ್ಟು, ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ನೀಡಬೇಕಾಗಿದೆ.
- ರುದ್ರೇಶ ಬೂದಿಹಾಳ
ಶಿಕ್ಷಕ, ಗದಗ
ಹಣ, ಹೆಂಡದ ಹೊಳೆ ನಿಲ್ಲಲಿ
ಚುನಾವಣೆ ಬಂತೆಂದರೆ ಸಾಕು.. ಎಲ್ಲೆಲ್ಲಿಯೂ ಹಣ, ಹೆಂಡದ ಹೊಳೆ ಹರಿಯುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಎಲ್ಲ ಪಕ್ಷದ ಅಭ್ಯರ್ಥಿಗಳು, ನಾಯಕರು, ಮುಖಂಡರು ತಮ್ಮ ಬಳಿಯಿರುವ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಣ, ಹೆಂಡವ ನೀಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಈ ಬಾರಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆಯಾದರೂ ಸಂಪೂರ್ಣವಾಗಿ ನಿಲ್ಲಿಸಲು ಆಗುತ್ತಿಲ್ಲ. ಇನ್ನು ಪೊಲೀಸರು ಜಿಲ್ಲೆಯಾದ್ಯಂತ ಚೆಕ್ಪೋಸ್ಟ್ಗಳನ್ನು ರಚಿಸಿ, ತಪಾಸಣೆ ನಡೆಸುತ್ತಿರುವ ಫಲವಾಗಿ ಲಕ್ಷಾಂತರ ಹಣ ಪೊಲೀಸರಿಗೆ ದೊರೆತಿದೆ. ಅಮೂಲ್ಯ ಮತವನ್ನು ಹಣ, ಹೆಂಡಕ್ಕೆ ಮಾರಿಕೊಳ್ಳದೇ ದೇಶದ ಹಿತ ಕಾಪಾಡುವವರಿಗೆ ನೀಡಬೇಕು.
- ಬಾಪುಗೌಡ ಪಿಡ್ಡನಗೌಡ್ರ
ಗೊಬ್ಬರ ವ್ಯಾಪಾರಸ್ಥ, ಗದಗ
ಜಾತಿ ರಾಜಕೀಯ ತೊಲಗಲಿ
ಇಂದು ಎಲ್ಲ ಪಕ್ಷಗಳಲ್ಲಿ ಜಾತಿ ರಾಜಕೀಯ ನಡೆಯುತ್ತಿರುವುದು ದುರದೃಷ್ಟಕರ. ಯಾವುದೇ ಪಕ್ಷವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲು ಒಂದೇ ಜಾತಿಯಿಂದ ಅಸಾಧ್ಯ. ಯಾವುದೇ ಮತದಾರರಾಗಲಿ ಜಾತಿ, ಪಕ್ಷವನ್ನು ನೋಡಿ ಮತ ಹಾಕಬಾರದು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯಲ್ಲಿರುವ ಒಳ್ಳೆಯ ಗುಣ, ಅಭ್ಯರ್ಥಿಯು ಜನರೊಂದಿಗೆ ಸ್ಪಂದಿಸಿ ಕೆಲಸ ಮಾಡುವನೋ, ಇಲ್ಲವೋ ಎಂಬುವುದನ್ನು ಸೂಕ್ಷ್ಮವಾಗಿ ಗಮನಿಸಿ ಅಂಥವರಿಗೆ ನಿಮ್ಮ ಅಮೂಲ್ಯ ಮತ ನೀಡಿ. ಎಲ್ಲ ಪಕ್ಷಗಳಲ್ಲಿಯೂ ಭ್ರಷ್ಟಾಚಾರ, ಹಗರಣಗಳ ಸರಮಾಲೆಗಳಿದ್ದು, ಮತದಾರೆರೆಲ್ಲರೂ ಒಮ್ಮತದ ನಿರ್ಣಯ ತೆಗೆದುಕೊಂಡು ಜನಪರ ಆಡಳಿತ ನೀಡುವ ವ್ಯಕ್ತಿಗೆ ಮತನೀಡಿ.
- ಶರಣಪ್ಪ ಹಡಪದ
ವಿದ್ಯಾರ್ಥಿ, ಗದಗ
ಮಹಿಳೆಯರಿಗೆ ಆದ್ಯತೆ ನೀಡಿ
ಇಂದು ಎಲ್ಲ ರಂಗದಲ್ಲಿಯೂ ಮಹಿಳೆ ಸಾಧನೆ ಮಾಡುವ ಮೂಲಕ ಪುರುಷರಷ್ಟೇ ಸಮನಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಆದರೆ, ಈ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷದಲ್ಲಿಯೂ ಪುರುಷ ಅಭ್ಯರ್ಥಿಗಳ ಮೇಲುಗೈ ಕಾಣುತ್ತಿದೆ. ಮಹಿಳೆಯರನ್ನು ಕಡೆಗಣಿಸಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಹಿಳೆಯರಿಗೆ ಸ್ಥಾನ ನೀಡಿರುವುದು ಮಹಿಳಾ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದ್ದು, ಎಲ್ಲ ಪಕ್ಷದ ವರಿಷ್ಠರು ಗಮನಹರಿಸಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡಬೇಕು. ಇನ್ನು ಮಹಿಳಾ ಮತದಾರರು ಕೂಡ ಮಹಿಳೆಯರ ಒಗ್ಗಟ್ಟು ಏನೆಂಬುವುದನ್ನು ಪಕ್ಷದ ವರಿಷ್ಠರಿಗೆ ತಿಳಿಸಬೇಕಾಗಿದೆ. ಮುಂಬರುವ ದಿನಗಳಲ್ಲಾದರೂ ಮಹಿಳೆಗೆ ಹೆಚ್ಚಿನ ಸ್ಥಾನ ನೀಡಬೇಕಾಗಿದೆ.
- ಪುಷ್ಪಲತಾ ಜಾಲಹಳ್ಳಿ
ಗೃಹಿಣಿ, ಗದಗ
ಮತದಾರರಿಗೆ ಚಿಂತೆ
ಇಂದಿನ ರಾಜಕೀಯ ಬೆಳವಣಿಗೆಗಮನಿಸಿದರೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ ಎಂಬುದು ಗೊತ್ತಾಗುತ್ತದೆ. ಕಳೆದ 5 ವರ್ಷ ಬಿಜೆಪಿ ಅಧಿಕಾರ ನಡೆಸಿದ್ದು, ಇಲ್ಲಿ ಹಲವು ಶಾಸಕ, ಸಚಿವರು ಹಲವು ಹಗರಣಗಳನ್ನು ಮಾಡಿ ಜೈಲುವಾಸ ಅನುಭವಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೆ ಗಣಿ ಹಗರಣದಿಂದಾಗಿ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತಾಯಿತು. ಇನ್ನು ಕೆಲವರು ರೆಸಾರ್ಟ್ ರಾಜಕೀಯ ನಡೆಸುವ ಮೂಲಕ 5 ವರ್ಷದಲ್ಲಿಯೇ 3 ಸಿಎಂಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾಂಗ್ರೆಸ್ ಸಹ ತನ್ನ 60 ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ನೀಡಿಲ್ಲ.
- ಉಮೇಶ ಬೇಲೇರಿ
ಕಂಪ್ಯೂಟರ್ ಶಿಕ್ಷಕ, ಗದಗ
ಭ್ರಷ್ಟಾಚಾರಿಗಳಿಗೆ ತಕ್ಕ ಪಾಠ ಕಲಿಸಿ
ಯಾವುದೇ ಪಕ್ಷದ ಅಭ್ಯರ್ಥಿ ಚುನಾಯಿಸಿ ಬರಲಿ. ಬಂದಂತಹ ಅಭ್ಯರ್ಥಿಗಳು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಲು ಶ್ರಮಿಸಬೇಕು. ಏಕೆಂದರೆ ಈಗಾಗಲೇ ಎಲ್ಲ ಪಕ್ಷದಲ್ಲಿಯೂ ಹಲವು ಶಾಸಕ, ಸಚಿವರು ಭ್ರಷ್ಟಾಚಾರ ನಡೆಸಿದ್ದಾರೆ. ಇಂತಹ ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಮತದಾರರು ಈ ಬಾರಿಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕಾಗಿದೆ. ಭ್ರಷ್ಟಾಚಾರಿಗಳಿಗೆ ತಕ್ಕಪಾಠ ಕಲಿಸಲು ಮತದಾರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಜನರು ತಮ್ಮ ಅಮೂಲ್ಯ ಮತವನ್ನು ಯೋಗ್ಯ ಅಭ್ಯರ್ಥಿಯನ್ನು ಗುರುತಿಸಿ ಮತ ಚಲಾಯಿಸಬೇಕು. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆಮಾಡಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು.
- ರಾಘವೇಂದ್ರ ಶಿವಶಿಂಪಗೇರ
ವಿದ್ಯಾರ್ಥಿ, ಗದಗ