ಬೇಸಿಗೆ ಶಿಬಿರದಿಂದ ಮನೋವಿಕಾಸ: ರಡ್ಡೇರ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 15
ಆಟ, ಓದು, ಬರಹಗಳ ಮೂಲಕ ನಮ್ಮ ದೇಹದ ಅಂಗಾಂಗಗಳನ್ನು ವೃದ್ಧಿಗೊಳಿಸಿಕೊಳ್ಳಲು ಶಿಬಿರಗಳು ಅವಶ್ಯ. ಇಂತಹ ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸದ ಆಯಾಮಗಳು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಹೇಳಿದರು.
ಅವರು ಸೋಮವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕೋಟೆ ಶಾಲೆಯಲ್ಲಿ ಭಾರತ ಜ್ಞಾನವಿಜ್ಞಾನ ಸಮಿತಿ ತಾಲೂಕು ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಮಕ್ಕಳ ಕೂಟ, ಸೃಷ್ಟಿ ಪ್ರತಿಸೃಷ್ಟಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಚಿಗುರು ಚೇತನ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಮತ್ತು ಪಾಲಕರಲ್ಲಿ ವಿಶ್ವಾಸವನ್ನು ಬೆಸೆಯುವ ಕೆಲಸವನ್ನು ಶಿಬಿರಗಳು ಮಾಡುತ್ತವೆ.
ಆಟ, ಓದು, ಬರಹ, ಹಾಡು, ಕುಣಿತಗಳ ಮೂಲಕ ನಮ್ಮ ದೇಹದ ಸೃಷ್ಟಿಯ ಅಂಗಾಂಗಗಳನ್ನು ವೃದ್ಧಿಗೊಳಿಸಿಕೊಳ್ಳುವಲ್ಲಿ ಇಂತಹ ಶಿಬಿರಗಳು ಪ್ರಮುಖ ಪಾತ್ರವಹಿಸುತ್ತವೆ. ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ವಿವಿಧ ಸಂಘಟನೆಗಳ ಮೂಲಕ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಡಯಟ್ ಉಪನ್ಯಾಸಕ ಎಸ್.ಎನ್. ಹಳ್ಳಿಗುಡಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಹತ್ತು ಹಲವಾರು ಪ್ರತಿಭೆಗಳನ್ನು ಹೊರತರಲು ಶಿಬಿರಗಳು ಪೂರಕವಾಗಿರುತ್ತವೆ ಎಂದರು.
ಶಿಬಿರದ ನಿರ್ದೇಶಕ ಡಾ. ನಿಂಗು ಸೊಲಗಿ ಮಾತನಾಡಿ, ಶಿಬಿರದಲ್ಲಿ ಸ್ಪೋಕನ್ ಇಂಗ್ಲಿಷ್, ವಿಜ್ಞಾನ ವಿಸ್ಮಯ, ಮೋಜಿನ ಗಣಿತ, ಜಾದು ಕಲಿಕೆ, ಸೃಜನಕಲೆ, ದೇಶಿಕಲೆ, ಜನಪದ ಆಟ, ವಾಚನಾಭಿನಯ, ಹಾಡುಗಾರಿಕೆ, ಪೊಲೀಸ್, ಪತ್ರಕರ್ತ, ಕೃಷಿಕ, ಸಾಹಿತಿಗಳೊಂದಿಗೆ ಸಂವಾದ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು. ಸಿ.ಕೆ. ಗಣಪ್ಪನವರ ಮಾತನಾಡಿದರು. ಆರ್.ಬಿ. ತಿಮ್ಮಾಪುರ, ಎಚ್.ಜಿ. ಗದ್ದಿಗೌಡ್ರ, ವಿ.ಎಚ್. ಹೊಳೆಯಮ್ಮನವರ, ಕೆ.ಡಿ. ಯತ್ನಟ್ಟಿ, ಎಸ್.ಎಸ್. ನಂಜನಗೂಡ, ಎಸ್.ವಿ. ಅರಿಸಿನದ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಆರ್. ಕಬ್ಬೇರ ಸ್ವಾಗತಿಸಿದರು. ಬಿ.ಸಿ. ರವಿಚಂದ್ರ ನಿರೂಪಿಸಿದರು. ವಿಶ್ವನಾಥ ಉಳ್ಳಾಗಡ್ಡಿ ವಂದಿಸಿದರು.