ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೋಣ: ರಂಗೇರಿದ ಚುನಾವಣೆ ಕಾವು

Lingaraj Badiger
Updated On : 16 Apr 2013, 12:08 pm

ಕನ್ನಡಪ್ರಭ ವಾರ್ತೆ, ರೋಣ, ಏ. 15
ಬರ ಪೀಡಿತ ಪ್ರದೇಶವೆಂದೇ ಹಣೆಪಟ್ಟಿ ಧರಿಸಿದ ರೋಣ ತಾಲೂಕಿನಲ್ಲಿ ಈಗ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಕಾವು ರಂಗೇರಿದ್ದು, ಬಿಸಿಲಿನ ಉಗ್ರ ತಾಪವನ್ನು ಲೆಕ್ಕಿಸದೇ ಅಭ್ಯರ್ಥಿ, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ನಿತ್ಯ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸುವುದಲ್ಲದೆ, ಅಲ್ಲಲ್ಲಿ ಬಹಿರಂಗ ಸಭೆ, ಸಮಾರಂಭಗಳನ್ನು ಏರ್ಪಡಿಸಿ ಪರಸ್ಪರ ಆರೋಪ, ಪ್ರತ್ಯಾರೋಪ ಮತ್ತು ಭರವಸೆಗಳ ಸುರಿಮಳೆ ಗೈಯುತ್ತಾ ಮತದಾರನ ಓಲೈಕೆಯಲ್ಲಿ ತೊಡಗಿದ್ದಾರೆ.
2008ರ ಚುನಾವಣೆಗಿಂತ ಈ ಬಾರಿ ಚುನಾವಣೆಯು ವಿಭಿನ್ನ ಮತ್ತು ತೀವ್ರ ಕುತೂಹಲದಿಂದ ಕೂಡಿದೆ. ಕಾಂಗ್ರೆಸ್‌ನ ಮಾಜಿ ಶಾಸಕ ಜಿ.ಎಸ್. ಪಾಟೀಲ ಮತ್ತು ಬಿಜೆಪಿಯ ಸಚಿವ ಕಳಕಪ್ಪ ಬಂಡಿ 3ನೇ ಬಾರಿ ಎದುರಾಳಿಗಳಾಗಿ ಅಖಾಡಕ್ಕಿಳಿದಿದ್ದು, ಇವರಿಬ್ಬರ ನಡುವೆ ನೇರ ಹಣಾಹಣಿ ಏರ್ಪಡುವುದು ಎಂದು ಉಭಯ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಲೆಕ್ಕಾಚಾರದಲ್ಲಿದ್ದರು.
ಆದರೆ, ಬದಲಾದ ರಾಜಕೀಯ ವ್ಯವಸ್ಥೆಯನ್ನು ಅವಲೋಕಿಸಿದಾಗ ಈ ಬಾರಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಯಾರು ಅಭ್ಯರ್ಥಿಗಳು: ಕಾಂಗ್ರೆಸ್‌ನ ಜಿ.ಎಸ್. ಪಾಟೀಲ್, ಬಿಜೆಪಿಯ ಸಚಿವ ಕಳಕಪ್ಪ ಬಂಡಿಗೆ ಪ್ರಬಲ ಪೈಪೋಟಿ ಒಡ್ಡಲು ಜೆಡಿಎಸ್‌ನ ಹೇಮಗಿರೀಶ ಹಾವಿನಾಳ, ಬಿಎಸ್‌ಆರ್ ಪಕ್ಷದ ಮೈಲಾರಪ್ಪ ಕರಿ, ಕೆಜೆಪಿಯ ಶರಣಬಸಪ್ಪ ಮೆಣಸಿನಕಾಯಿ, ಜನಲೋಕ ಪಾರ್ಟಿಯ ಫಕೀರಪ್ಪ ತೆಗ್ಗಿನಮನಿ, ಬಿಎಸ್‌ಪಿಯ ನಿಂಗಬಸಪ್ಪ ದೊಡ್ಡಮನಿ, ಶುಭ ಕರ್ನಾಟಕ ಪಕ್ಷದ ಮೋತಿಲಾಲಸಾ ಮಲಜಿ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಬೂದಿಹಾಳ, ರಾಮಪ್ಪ ಮೇಗಲಮನಿ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ.
ರೋಣ ಮತಕ್ಷೇತ್ರದಲ್ಲಿ ಇಲ್ಲಿಯವರೆಗೂ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಮಧ್ಯೆ ನೇರ ಹಣಾಹಣಿ ಏರ್ಪಡುತ್ತಲೇ ಬಂದಿದೆ.
2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡನೆಯಿಂದ ರೋಣ ತಾಲೂಕಿನ 65, ಮುಂಡರಗಿಯ 28 ಮತ್ತು ಗದಗ ತಾಲೂಕಿನ 5 ಹಳ್ಳಿಗಳು ಸೇರಿ ಒಟ್ಟು 98 ಹಳ್ಳಿಗಳನ್ನು ಒಳಗೊಂಡಿದೆ. ಒಟ್ಟು 1,88,449 ಮತದಾರರಿದ್ದು, ಇದರಲ್ಲಿ 96,415 ಪುರುಷ ಹಾಗೂ 92,034 ಮಹಿಳಾ ಮತದಾರರಿದ್ದಾರೆ. ಬಿಜೆಪಿಯ ಕಳಕಪ್ಪ ಬಂಡಿ ಹ್ಯಾಟ್ರಿಕ್ ಜಯ ಸಾಧಿಸಲು ಸಿದ್ಧತೆ ನಡೆಸಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಾಜಿ ಶಾಸಕ ಜಿ.ಎಸ್. ಪಾಟೀಲ ಗೆಲುವಿಗೆ ಹೋರಾಟ ನಡೆಸಿದ್ದಾರೆ. ಅದೃಷ್ಟದ ಆಟದಲ್ಲಿ ಮತದಾರ ಯಾರಿಗೆ ವಿಜಯ ಮಾಲೆ ಹಾಕುತ್ತಾನೆ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement