ಇಂದು ನಾಮಪತ್ರ ಸಲ್ಲಿಕೆ: ಹಾವಿನಾಳ
ಗಜೇಂದ್ರಗಡ: ರೋಣ ಕ್ಷೇತ್ರದ ಅಪಾರ ಮತದಾರರು ಹಾಗೂ ಪಕ್ಷದ ಹಿರಿಯರ, ಅಭಿಮಾನಿಗಳ ಬೆಂಬಲದೊಂದಿಗೆ ಏ. 17ರಂದು ರೋಣ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಜೆಡಿಎಸ್‌ನ ನಿಯೋಜಿತ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಹೇಳಿದರು. ಅವರು ಮಂಗಳವಾರ ಸ್ಥಳೀಯ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಜನತೆ ಬಿಜೆಪಿಯ ರಾಜಕಾರಣದಿಂದ ಬೇಸತ್ತು ಈ ಬಾರಿ ಬದಲಾವಣೆ ಬಯಸಿದ್ದಾರೆ. ಜತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಜನಪರ ಆಡಳಿತ ಜನ ಮರೆಯದಂತೆ ಮಾಡಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್‌ನ ಡೊಂಗಿ ರಾಜಕಾರಣಕ್ಕೆ ಮಣಿ ಹಾಕದೇ ಎಚ್‌ಡಿಕೆ ಕೈಬಲ ಪಡಿಸಲು ಮುಂದಾಗಿದ್ದಾರೆ. ಜತೆಗೆ ರೋಣ ಮತಕ್ಷೇತ್ರದಲ್ಲಿ ಮತದಾರರು ಹೊಸತನ್ನು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜಾತ್ಯತೀತ ಜನತಾದಳದ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಡಾ. ಮಂಜುನಾಥ ವಿಶ್ವಬ್ರಾಹ್ಮಣ, ಕೆ.ಎಸ್. ಕೊಡತಗೇರಿ, ಉಮೇಶ ಮಲ್ಲಾಪುರ, ಶರಣಪ್ಪ ಪೂಜಾರ, ಮಹಾದೇವಪ್ಪ ನವಲಗುಂದ, ಅಜ್ಜು ಬೇಪಾರಿ, ನಿಂಗಪ್ಪ ನವಲಗುಂದ, ಉಮೇಶ ಗಿರೇಗೌಡರ, ಎಂ.ಜಿ. ವಡ್ಡಟ್ಟಿ ಮುಂತಾದವರು ಉಪಸ್ಥಿತರಿದ್ದರು.