ಎಚ್ಕೆ ವಿರುದ್ಧ ಒಮ್ಮತದ ಅಭ್ಯರ್ಥಿ
ಕನ್ನಡಪ್ರಭ ವಾರ್ತೆ, ಗದಗ, ಏ. 16
ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಸೇರಿ ಒಮ್ಮತದ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಲು ಗಂಭೀರವಾದ ಚಿಂತನೆ ನಡೆಸಿದ್ದಾರೆ.
ಮಂಗಳವಾರ ನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಬಿಜೆಪಿ, ಕೆಜೆಪಿ, ಜೆಡಿಎಸ್, ಬಿಎಸ್ಸಾರ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಈಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತ ಹಾಗೂ ಗೆದ್ದ ಅಭ್ಯರ್ಥಿಗಳೆಲ್ಲ ಸಭೆ ಸೇರಿ ಒಮ್ಮತದ ಅಭ್ಯರ್ಥಿ ಬಗ್ಗೆ ಚಿಂತನೆ ನಡೆಸಿದ್ದಾರೆ. ರಾಜ್ಯ ಮಟ್ಟದ ನಾಯಕರು ತಮ್ಮ ಹಿತಾಸಕ್ತಿಗಾಗಿ ಪಕ್ಷಗಳನ್ನು ಸ್ಥಾಪಿಸುತ್ತಾ ಹೋದಲ್ಲಿ ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಭವಿಷ್ಯ ಮಂಕಾಗುತ್ತದೆ. ಕಾಂಗ್ರೆಸ್ಸೇತರರು ಮತ್ತೊಮ್ಮೆ ಮೂಲೆಗುಂಪಾಗುವ ಸಾಧ್ಯತೆ ಇದೆ. ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಪಕ್ಷಗಳಿಗೆ ಹಾಗೂ ರಾಜ್ಯ ನಾಯಕರಿಗೆ ಪಾಠ ಕಲಿಸಲು ಇವರೆಲ್ಲರೂ ನಿರ್ಧರಿಸಿದ್ದಾರೆ.
ಪ್ರಾಯೋಗಿಕವಾಗಿ ಗದಗನಲ್ಲಿ: ಎಲ್ಲ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈಗೇನು ಮಾಡಲು ಸಾಧ್ಯ ಎಂದು ಮೂಗು ಮುರಿಯುವ ಬದಲು, ಹಲವು ಪಕ್ಷಗಳಲ್ಲಿ ಹಂಚಿ ಹೋಗಿದ್ದ ಕಾಂಗ್ರೆಸ್ಸೇತರ ಸಮಾನ ಮನಸ್ಕರು ಸಭೆ ನಡೆಸಿ ಕಾಂಗ್ರೆಸ್ ವಿರುದ್ಧ ಒಬ್ಬರೇ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಲು ಚಿಂತಿಸಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಸಮಾನ ಮನಸ್ಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಆತಂಕ: ಕಾಂಗ್ರೆಸ್ಸೇತರ ಒಂದು ವರ್ಗವೇ ರಾಜಕೀಯದಲ್ಲಿದೆ. ಆದರೆ ನಾಯಕರ ಕಚ್ಚಾಟ, ಸ್ವ ಹಿತಾಸಕ್ತಿಗಾಗಿ ಬಹುತೇಕ ದೂರವಾಗಿದ್ದಾರೆ. 2008ರ ಚುನಾವಣೆ ಬಳಿಕ ಬಿಜೆಪಿಯಲ್ಲಾದ ಬೆಳವಣಿಗೆಗಳು ಕಾರ್ಯಕರ್ತರಲ್ಲಿ ತೀವ್ರ ನೋವುಂಟು ಮಾಡಿದೆ. ಯಡಿಯೂರಪ್ಪ ಮತ್ತು ಶ್ರೀರಾಮುಲು ಪ್ರತ್ಯೇಕ ಪಕ್ಷಗಳನ್ನು ಸ್ಥಾಪಿಸಿ ಅಖಾಡಕ್ಕಿಳಿದಿದ್ದು, ಇದು ಮೂರು ಪಕ್ಷಗಳ ಸೋಲಿಗೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾದರೆ ಕಾಂಗ್ರೆಸ್ಸೇತರ ಕಾರ್ಯಕರ್ತರು ರಾಜಕೀಯದಿಂದ ಶಾಶ್ವತವಾಗಿ ದೂರವಾಗುತ್ತಾರೆ ಎನ್ನುವ ಆತಂಕದಿಂದಲೇ ಈ ಪ್ರಯತ್ನ ನಡೆಯುತ್ತಿದೆ.
ತಂತ್ರಗಾರಿಕೆಯೇ?: ರಾಜ್ಯದಲ್ಲೆಲ್ಲೂ ಇಲ್ಲದ ಈ ಪ್ರಯತ್ನ ಕೇವಲ ಗದಗ ಕ್ಷೇತ್ರದಲ್ಲಿ ಮಾತ್ರ ಏಕೆ ನಡೆಯುತ್ತಿದೆ ಎನ್ನುವ ಜಿಜ್ಞಾಸೆ ಎಲ್ಲರನ್ನೂ ಕಾಡುತ್ತಿದೆ. ಕೆಲವರು ಎಚ್.ಕೆ. ಪಾಟೀಲ ಅವರನ್ನು ಸೋಲಿಸಲು ಈ ರಣತಂತ್ರ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇದು ಉತ್ತಮ ಬೆಳವಣಿಗೆ, ರಾಜ್ಯಕ್ಕೆ ಮಾದರಿಯಾಗುವ ಕೆಲಸವನ್ನು ಗದುಗಿನ ಯುವ ರಾಜಕಾರಣಿಗಳು ಮಾಡುತ್ತಿದ್ದಾರೆ. ಇದಕ್ಕೆ ರಾಜಕೀಯದಿಂದ ದೂರ ಉಳಿದಿರುವ ಹಿರಿಯರು ಮಾರ್ಗದರ್ಶನ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಕಾಣದವರ ಬಲವಾದ ಕೆಲಸ: ಗದಗನಲ್ಲಿ ಮಾತ್ರ ಇಂತಹ ಪ್ರಯತ್ನ ನಡೆಸಲು ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು, ಕಾಂಗ್ರೆಸ್ಸೇತರರು ಒಟ್ಟಿಗೆ ಸೇರಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ. ಈ ಕುರಿತು ಎಲ್ಲರೊಂದಿಗೂ ಚರ್ಚಿಸಲು ಸಭೆ ನಡೆಸಲು ಸೂಚಿಸಿದ ಹಿನ್ನೆಲೆಯಲ್ಲಿ ಈ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಚ್ಕೆ ಪಾಟೀಲರ ಗೆಲುವಿಗೆ ಕಡಿವಾಣ ಹಾಕಲು ಇಂತಹ ಪ್ರಯತ್ನ ನಡೆದಿದೆ ಎಂದಾದಲ್ಲಿ, ರಾಜ್ಯ ಮಟ್ಟದ ನಾಯಕರ ವಕ್ರದೃಷ್ಟಿ ಗದುಗಿನತ್ತ ಇದೆ ಎನ್ನುವುದೂ ಸ್ಪಷ್ಟವಾಗುತ್ತದೆ. ಎಚ್ಕೆ ಸೋತರೆ ಯಾರಿಗೆ ಲಾಭ ಎಂಬುದನ್ನು ವಿಚಾರಿಸಿದರೆ ಈ 'ಕೈ'ವಾಡ ಯಾರದ್ದು ಎಂಬುದು ಗೊತ್ತಾಗುತ್ತದೆ.
-ಶಿವಕುಮಾರ ಕುಷ್ಟಗಿ